ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂಡೋ-ಇಸ್ರೇಲ್ ಸಹಯೋಗದಲ್ಲಿ ರಸಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇ ಆದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಬೆಂಗಳೂರು ಲಾಲ್‌ಬಾಗ್ ಅಪರ ನಿರ್ದೇಶಕ ಕೆ.ಬಿ.ದುಂಡಿ ಹೇಳಿದರು.ಇಂಡೋ-ಇಸ್ರೇಲ್ ಸಹಯೋಗದಲ್ಲಿ ನೀರಾವರಿ ಹಾಗೂ ರಸಾವರಿ ಕುರಿತು ನಡೆಯುತ್ತಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರವು ತಾಲೂಕಿನ ಚಿಕ್ಕಸಂಶಿ ಗ್ರಾಮದ ಜಮೀನಿನಲ್ಲಿ ಅಳವಡಿಸಲಾದ ಹನಿ ನೀರಾವರಿ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಈ ವೇಳೆ ಮಾತನಾಡಿದರು. ರೈತರಿಗೆ ಈ ಕುರಿತು ತಿಳಿಸಿಕೊಡುವ ನಿಟ್ಟಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಅಧಿಕಾರಿಗಳಿಗೆ ಉತ್ಕೃಷ್ಟ ಕೇಂದ್ರದ ಮೂಲಕ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ರೈತರು ರಸಾವರಿ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಯಾವ ರೀತಿ ತಾಂತ್ರಿಕತೆ ಅಳವಡಿಕೊಳ್ಳಬೇಕು? ಅದನ್ನು ಹೇಗೆ ಉಪಯೋಗಿಸಬೇಕು? ನಿರ್ವಹಣೆ ಮಾಡುವ ಬಗ್ಗೆ ರೈತರಿಗೆ ತೊಂದರೆಯಾದಾಗ ಅದನ್ನು ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ತರಬೇತಿ ಮೂಲಕ ತಿಳಿಸಿಕೊಡಲಾಗುತ್ತಿದೆ. ಇದಕ್ಕಾಗಿ ಪರಿಣಿತರು ತರಬೇತಿ ನೀಡಲು ಬಂದಿದ್ದಾರೆ. ತರಬೇತಿ ಪಡೆದವರು ಮುಂದೆ ತಮ್ಮ ರಾಜ್ಯದ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ಮಹಾರಾಷ್ಟ್ರ, ಗೋವಾ, ಗುಜರಾತ, ಕೇರಳ ಹಾಗೂ ಕರ್ನಾಟಕ ಸೇರಿದಂತೆ ಒಟ್ಟು 32 ಜನ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆಯಲು ಬಂದ ತಂಡಕ್ಕೆ ಚಿಕ್ಕಸಂಶಿ ಗ್ರಾಮದ ಈರಪ್ಪ ಭೀಮಪ್ಪ ಕೋಮಾರ ಅವರ ಸರ್ವೆ ನಂ.16ರ ಜಮೀನಿಗೆ ಭೇಟಿ ನೀಡಿ ಜಮೀನಿನಲ್ಲಿ ಅಳವಡಿಸಲಾದ ಹನಿ ನೀರಾವರಿ ಕುರಿತು ನೆಟಾಪಿನ್ ಕಂಪನಿಯ ಪರಿಣಿತ ಸಂದೀಪ ಜಾವಳೇಕರ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಹನಿ ನೀರಾವರಿಯಲ್ಲಿ ಅಳವಡಿಸಲಾದ ತಾಂತ್ರಿಕತೆಯ ಪ್ರತಿಯೊಂದು ಹಂತದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿ, ಜಮೀನುಗಳಿಗೆ ನೀರು ಪೂರೈಕೆಯ ಡೆಮೋ ತಿಳಿಸಲಾಯಿತು. ಸೇವಂತಿ ಹೂ ಬೆಳೆದ ಜಮೀನಿನಲ್ಲಿ ಅಳವಡಿಸಲಾದ ವಾಲ್ಗಳ ಮೂಲಕ ಸರಬರಾಜು ಆಗುವ ನೀರಿನ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಂದು ಹಂತದಲ್ಲಿ ನೀರಿನ ಒತ್ತಡದ ಪ್ರಮಾಣದ ಬಗ್ಗೆ ತಿಳಿಸಿಕೊಟ್ಟರು.
ಪ್ರಾಯೋಗಿಕ ತರಬೇತಿ ಸಂದರ್ಭದಲ್ಲಿ ಇಂಡೋ-ಇಸ್ರೇಲ್ ಯೋಜನೆಯ ಯೋಜನಾಧಿಕಾರಿ ಬ್ರಹ್ಮದೇವ, ನೆಟಾಪಿನ್ ಕಂಪನಿಯ ಪರಿಣಿತ ಪ್ರಶಾಂತ ಮಂಚೋಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ ಸೇರಿದಂತೆ ತೋಟಗಾರಿಕೆ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.