ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಉನ್ನತ ಶಿಕ್ಷಣದಲ್ಲಿ ಅಭೂತಪೂರ್ವ ಸವಾಲುಗಳು ಮತ್ತು ಅವಕಾಶಗಳಿದ್ದು, ಯಾವುದೇ ಒಂದು ದೇಶ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್.ಎಸ್ ಅವರು ಅಭಿಪ್ರಾಯಪಟ್ಟರು.ತುಮಕೂರು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕ್ಯಾಸಂದ್ರ ಟೋಲ್ ಗೇಟ್ ಬಳಿ ಇರುವ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭ, ಸೈಬರ್ ಸೆಕ್ಯೂರಿಟಿ ಮತ್ತು ಸ್ಪೇಸ್ ಲ್ಯಾಬ್ ತ್ರಿಲಕ್ಷಣ ಪ್ರಯೋಗಾಲಯ ಸೇರಿದಂತೆ ಇತರೆ ಘಟಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಮಾನ ಮತ್ತು ಪ್ರಬುದ್ಧ ಜ್ಞಾನ ಸಮಾಜಕ್ಕಾಗಿ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನ ರೂಪಿಸಿ ರಾಷ್ಟ್ರವನ್ನು ಸಮರ್ಥವಾಗಿ ಪರಿವರ್ತಿಸಲು ಇಂಜಿನಿಯರಿಂಗ್ ಶಿಕ್ಷಣದ ಕೊಡುಗೆ ಅಪಾರವಾಗಿದೆ ಎಂದರು.ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ ಮತ್ತು ಸಮಗ್ರ ಅಭಿವೃದ್ಧಿ ಸೇರಿದಂತೆ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು ಭವಿಷ್ಯತ್ತಿನ ಸವಾಲುಗಳನ್ನು ಎದುರಿಸಲು ಡಿಜಿಟಲ್ ಕಲಿಕಾ ವೇದಿಕೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಉಪಕ್ರಮಗಳನ್ನು ವಿಸ್ತರಿಸುವ ಸಲುವಾಗಿ ಪ್ರಾಯೋಗಿಕ ಕಲಿಕೆ ಮತ್ತು ಈ ಶತಮಾನದ ಇಂಜಿನಿಯರ್‌ಗಳಿಗೆ ಬೇಕಾಗುವ ಸುಸ್ಥಿರತೆಯ ಶಿಕ್ಷಣ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಡಾ. ವಿದ್ಯಾಶಂಕರ್ ಅವರು ಹೇಳಿದರು.ಪ್ರಸ್ತುತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹಳಷ್ಟು ಬೇಡಿಕೆ ಇದ್ದು, ಹೊಸ ತಾಂತ್ರಿಕ ಸಂಶೋಧನೆ ಯೊಂದಿಗೆ ಹೊಸ ಉದ್ಯಮಗಳನ್ನು ಸೃಷ್ಠಿಸುತ್ತಿರುವ ಶಿಕ್ಷಣ ವ್ಯವಸ್ಥೆಯು ದೇಶದಲ್ಲಿ ಜ್ಞಾನದ ಆವಿಷ್ಕಾರವಾಗಿ ಬೆಳೆದು ನಿಂತಿದೆ. ವಿಕಸಿತ ಭಾರತದ ಅಡಿಯಲ್ಲಿ ಕೇಂದ್ರ ಸರ್ಕಾರವು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವ ಸಲುವಾಗಿ ಬೇಡಿಕೆ ಇರುವ ಸ್ಪರ್ಧಾತ್ಮಕ ಮಾರುಕಟ್ಟೆ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾದ ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ. ಇದರೊಂದಿಗೆ ಇಂದು ಐಎ ತಂತ್ರಜ್ಞಾನ ಜೊತೆಗೆ ಇಂಜಿನಿಯರಿಂಗ್ ತಾಂತ್ರಿಕತೆಯನ್ನು ಬಳಸಿಕೊಂಡು ಭಾರತವನ್ನ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರುಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ದೇಶ ಇಂದು ತಾಂತ್ರಿಕವಾಗಿ ಬೆಳೆಯುತ್ತಿದ್ದು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ದೇಶದಿಂದ 5 ಮಿಲಿಯನ್ ಪದವೀಧರರು ಹೊರ ಬರುತ್ತಿದ್ದು, ಶೇಕಡ ೫ರಷ್ಟು ಮಾತ್ರ ತಾಂತ್ರಿಕವಾಗಿ ಗುರುತಿಸಿಕೊಳ್ಳುವ ವಿದ್ಯಾರ್ಥಿಗಳು ಕಂಡುಬರುತ್ತಿದ್ದಾರೆ. ಇಂದು ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವ ಸಲುವಾಗಿ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿದ್ದು, ತಾಂತ್ರಿಕತೆಯ ಆವಿಷ್ಕಾರ ಮತ್ತು ಗುಣಾಟದ ಶಿಕ್ಷಣ ವ್ಯವಸ್ಥೆಯನ್ನು ನೀಡುವಲ್ಲಿ ಶಾಹೇ ವಿಶ್ವವಿದ್ಯಾಲಯವು ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ಹಾಗೂ ಪ್ರಾಯೋಗಿಕ ಜ್ಞಾನದ ಶಿಕ್ಷಣವನ್ನು ನೀಡುವ ಸಲುವಾಗಿ ದೇಶ ವಿದೇಶಗಳಲ್ಲಿ ಇರುವಂತಹ ಸ್ಪರ್ಧಾತ್ಮಕ ಶಿಕ್ಷಣದ ವ್ಯವಸ್ಥೆಯನ್ನ ನಮ್ಮ ದೇಶದಲ್ಲಿ ಸಹಸ್ರ ವಿದ್ಯಾರ್ಥಿಗಳು ಪಡೆಯುತ್ತಿದ್ದು, ಇದರಲ್ಲಿ ಹೊರದೇಶಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಇಂದು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ೩೦ರಷ್ಟು ಇಂಜಿನಿಯರ್ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದು ಇದರ ಸಂಖ್ಯೆಯು ಇನ್ನೂ ಹೆಚ್ಚಾಗಬೇಕಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.ತುಮಕೂರು ನಗರದ ಸಮೀಪದ ವಸಂತನರಸಾಪುರದಲ್ಲಿ ನೂತನ ಸ್ಟಾರ್ಟ್ ಆಫ್ ಕಂಪನಿಗಳು ಹಾಗೂ ಉದ್ಯೋಗ ನೀಡುವಂತಹ ಹೊಸ ಕಂಪನಿಗಳು ತಲೆ ಎತ್ತುತ್ತಿದ್ದು ತಾಂತ್ರಿಕ ಕ್ಷೇತ್ರದಲ್ಲಿ ವಿವಿಧ ಆಯಾಮಗಳಲ್ಲಿ ಸಂಶೋಧನಾತ್ಮಕ ಶಿಕ್ಷಣ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳನ್ನು ಒದಗಿಸಲು ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಮುಖ್ಯ ಅತಿಥಿಯಾಗಿ ಧಾರವಾಡದ ಐಐಟಿಯ ನಿರ್ದೇಶಕ ಪ್ರೊ. ಎಸ್.ಆರ್.ಮಹದೇವಪ್ರಸನ್ನ ಅವರು ಮಾತನಾಡಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ದಕ್ಷಿಣ ಭಾಗದಲ್ಲಿ ಮಹತ್ತರವಾದ ಶೈಕ್ಷಣಿಕ ಸಾಧನೆಗಳನ್ನ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವಂತಹ ಶಿಕ್ಷಣವನ್ನು ನೀಡಿದೆ. ಭವಿಷ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತ ದೇಶಕ್ಕೆ ತನ್ನದಾದ ಕೊಡುಗೆಯನ್ನು ನೀಡಲಿದ್ದಾರೆ. ದೇಶದಲ್ಲಿ ಸುಮಾರು ಸಾವಿರ ಇಂಜಿನಿಯರಿಂಗ್ ಕಾಲೇಜುಗಳಿದ್ದು ಹೊರದೇಶಕ್ಕೆ ಹೋಗಿ ತಾಂತ್ರಿಕವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕತೆಯನ್ನು ತಪ್ಪಿಸಿದಂತಾಗಿದೆ ಎಂದು ತಿಳಿಸಿದರು. ಇಡೀ ಪ್ರಪಂಚಕ್ಕೆ ಮಾರಕವಾಗಿರುವ ಸೈಬರ್ ಸೆಕ್ಯೂರಿಟಿ ಬಗ್ಗೆ ಅಧ್ಯಯನಗಳು ಕರ್ನಾಟಕದಲ್ಲಿ ಶುರುವಾಗಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಆಗುವ ಹಾಗು ಹೋಗುಗಳನ್ನು ಸಂಶೋಧನೆ ನಡೆಸಲು ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ತಯಾರಿಸಿರುವ ಲ್ಯಾಬ್ ಅದ್ಭುತವಾಗಿದ್ದು, ಕೈಗಾರಿಕಾ ವಲಯಕ್ಕೆ ಸಾಕಷ್ಟು ಸಂಶೋಧನೆ ನಡೆಸಲು ಅನೇಕ ಕೊಡುಗೆಗಳನ್ನು ನೀಡಿದೆ ಎಂದು ಅವರು ಹೇಳಿದರು.ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ಕೆ.ಬಿ. ಲಿಂಗೇಗೌಡ, ಪ್ರಾಂಶುಪಾಲರಾದ ಡಾ. ಎಲ್.ಸಂಜೀವ್ ಕುಮಾರ್ , ಎಸ್‌ಎಸ್‌ಐಟಿ ಪ್ರಾಂಶುಪಾಲರಾದ ಡಾ.ರವಿಪ್ರಕಾಶ್, ಕುಲಾಧಿಪತಿಗಳ ಸಲಹೆಗಾರಾರದ ಡಾ.ವಿವೇಕ್ ವೀರಯ್ಯ, ಹಸ್ತಾಕ್ಷ ಲ್ಯಾಬ್‌ನ ನಂದಿಧರ್ಮ ಕೀಶೋರ್ ಎಸ್, ತ್ರಿಲಕ್ಷಣ ಸ್ಪೇಸ್ ಲ್ಯಾಬ್‌ನ ಸತೀಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓ ಪ್ರಭು, ಎಸ್ಪಿ ಅಶೋಕ್, ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.