ಸಾರಾಂಶ
ಬಿ.ಜಿ.ಕೆರೆಬಸವರಾಜ್
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುವರ್ಷದ ಹಿಂದೆ ಮರು ನಿರ್ಮಾಣಗೊಂಡ ಮೊಳಕಾಲ್ಮುರು ಮೂಲಕ ಹಾದು ಹೋಗಿರುವ ಹಂಪಿ, ಕಮಲಾಪುರ, ಹಗರಿಬೊಮ್ಮನಹಳ್ಳಿ ರಾಜ್ಯ ಹೆದ್ದಾರಿ 131 ಇತ್ತೀಚೆಗೆ ಬಿದ್ದ ಮಳೆಗೆ ಕಿತ್ತು ಹೋಗಿದ್ದು ಅಲ್ಲಲ್ಲಿ ಬಿದ್ದಿರುವ ಆಳುದ್ದದ ಗುಂಡಿಗಳಿಂದ ವಾಹನ ಸವಾರರು ಪರಿತಪಿಸುವಂತಾಗಿದೆ.ತಾಲೂಕಿನ ರಾಂಪುರ ಗ್ರಾಮದಿಂದ ಗುಡ್ಡಗಾಡು ಪ್ರದೇಶ ಸೀಳಿಕೊಂಡು ಸಾಗಿರುವ ರಾಜ್ಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ವರ್ಷದ ಹಿಂದೆ ಅಗಲೀಕರಣ ಗೊಳಿಸಿ 7 ಮೀಟರ್ ಅಗಲದಲ್ಲಿ ದ್ವಿಪಥ ರಸ್ತೆ ಮರು ನಿರ್ಮಾಣ ಮಾಡಲಾಗಿದೆ.
ಓಬಳಾಪುರದಿಂದ ಬಾಂಡ್ರವಿವರೆಗೆ ತಾಲೂಕನ್ನು ಬಳಸಿಕೊಂಡು ಸಾಗಿರುವ ಹೆದ್ದಾರಿಯಲ್ಲಿ ಗಣಿ ಲಾರಿಗಳು ವಿಪರೀತ ಓಡಾಡುತ್ತಿವೆ. ಇದರೊಟ್ಟಿಗೆ ಇತ್ತೀಚೆಗೆ ಬಿದ್ದ ಮಳೆಯು ಸಹ ಹೆದ್ದಾರಿಯನ್ನು ಇನ್ನಷ್ಟು ಹಾಳುಗೆಡವಿದೆ. ಹೆದ್ದಾರಿಯಲ್ಲಿ ನಿರ್ಮಿಸಿರುವ ಸೇತುವೆಗಳ ಅಕ್ಕ ಪಕ್ಕದಲ್ಲಿ ತಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ಪ್ರಯಾಸದಿಂದ ಸಂಚರಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.ರಾಂಪುರ ಗ್ರಾಮದಿಂದ ಓಬಳಾಪುರ, ಮೇಗಳ ಕಣಿವೆ, ಕೆಳಗಿನ ಕಣಿವೆ, ಬಾಂಡ್ರವಿ, ಹನುಮನಗುಡ್ಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳನ್ನು ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಸಂಡೂರಿನ ಗಣಿ ಪ್ರದೇಶದ ಗ್ರಾಮಗಳನ್ನು ಸಂಪರ್ಕಿಸುವ ಹೆದ್ದಾರಿ ಇದಾಗಿದೆ. ನಿತ್ಯ ನೂರಾರು ವಾಹನಗಳ ಸಂಚಾರ ಇದೆ. ಹೆದ್ದಾರಿ ಹದಗೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ. ಬಾಂಡ್ರವಿ ಗ್ರಾಮದ ಅನತೀ ದೂರದಲ್ಲಿ ಗಣಿ ಕಂಪನಿಯೊಂದಿದ್ದು ಅಲ್ಲಿಂದ ನಿತ್ಯ ಅದಿರು ತುಂಬಿದ ಲಾರಿಗಳು ಇದೇ ರಸ್ತೆಯಲ್ಲಿ ಸಾಗುತ್ತಿವೆ. ಪರಿಣಾಮ ಒತ್ತಡ ಹೆಚ್ಚಾಗಿ ಹೆದ್ದಾರಿ ಹಾಳಾಗಿದೆ. ಓಬಳಾಪುರ, ಕೆಳಗಿನ ಕಣಿವೆ, ಮೇಗಳ ಕಣಿವೆ ಸೇರಿದಂತೆ ವಿವಿಧ ಕಡೆಯಲ್ಲಿ ಸಾಲು ಸಾಲಾಗಿ ಹೆದ್ದಾರಿಯಲ್ಲಿ ತಗ್ಗು ಗುಂಡಿಗಳು ಕಾಣಸಿಗುತ್ತವೆ.
ಸಾರಿಗೆ ಸಂಪರ್ಕ ಇಲ್ಲದೆ ಶಾಲಾ, ಕಾಲೇಜಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳಿಗೆ ಬರುವಂತ ನಾಗರಿಕರು ಆಟೋ, ದ್ವಿಚಕ್ರ ಸೇರಿದಂತೆ ಇನ್ನಿತರೆ ವಾಹನಗಳನ್ನೇರಿ ಇದೇ ರಸ್ತೆಯನ್ನು ಬಳಸಿಕೊಂಡು ರಾಂಪುರ ಮತ್ತು ವಿವಿಧ ಕಡೆಗೆ ಸಂಚರಿಸಬೇಕಿದೆ. ಜತೆಗೆ ಸಂಡೂರು ಭಾಗದ ನೂರಾರು ರೈತಾಪಿ ವರ್ಗ ವ್ಯಾಪಾರಕ್ಕೆ ಪ್ರಮುಖ ಕೇಂದ್ರ ಸ್ಥಾನವಾಗಿರುವ ತಾಲೂಕಿನ ರಾಂಪುರಕ್ಕೆ ಆಗಮಿಸುತ್ತಾರೆ.