ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿಯಲ್ಲಿ ಪೆರ್ನೆ ಗ್ರಾಮದಲ್ಲಿ ಹೆದ್ದಾರಿ ಕ್ರಾಸಿಂಗ್ ವ್ಯವಸ್ಥೆಯನ್ನು ಕಲ್ಪಿಸದೆ ಪೆರ್ನೆ ಗ್ರಾಮವನ್ನು ಕಡೆಗಣಿಸಿರುವ ಬಗ್ಗೆ ಸಾರ್ವಜನಿಕರಿಂದ ವ್ಯಕ್ತವಾದ ದೂರಿಗೆ ಸ್ಪಂದಿಸಿ ಸಂಸದರ ನಿರ್ದೇಶನದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.

ಬಿ.ಸಿ. ರೋಡ್‌ನಿಂದ ಅಡ್ಡಹೊಳೆ ತನಕದ ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಪ್ರತಿ ಗ್ರಾಮಕ್ಕೆ ೨ ಕಿ.ಮೀ. ದೂರಕ್ಕೆ ಕ್ರಾಸಿಂಗ್ ಒದಗಿಸುವಂತೆ ನೀಲ ನಕಾಶೆಯಲ್ಲಿ ನಿಗದಿಪಡಿಸಲಾಗಿತ್ತು. ಆದರೆ ಪೆರ್ನೆ ಗ್ರಾಮದಲ್ಲಿ ಮಾತ್ರ ಯಾವುದೇ ಕ್ರಾಸಿಂಗ್ ವ್ಯವಸ್ಥೆ ಕಲ್ಪಿಸದೆ ಬೆಳೆಯುತ್ತಿರುವ ಪೇಟೆಯಾಗಿರುವ ಪೆರ್ನೆ ಗ್ರಾಮಸ್ಥರು ಸತ್ತಿಕ್ಕಲ್ ಅಥವಾ ಕರುವೇಲುವರೆಗೆ ಸಾಗಿ ತಮ್ಮ ಗ್ರಾಮದ ಪ್ರದೇಶಕ್ಕೆ ಪ್ರವೇಶಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಸೂಕ್ಷ್ಮತೆ ಬಗ್ಗೆ ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳು ದ.ಕ. ಜಿಲ್ಲಾ ಸಂಸದರನ್ನು ಭೇಟಿ ಮಾಡಿ ಪೆರ್ನೆ ಗ್ರಾಮಸ್ಥರಿಗೆ ನ್ಯಾಯ ದೊರಕಿಸುವಂತೆ ಮನವಿ ಸಲ್ಲಿಸಿದ್ದರು.

ಮನವಿ ಪರಿಶೀಲಿಸಿದ ಸಂಸದರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪುಷ್ಪರಾಜ್ ಚೌಟ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಎಂಜಿನಿಯರ್‌ಗಳ ತಂಡ ಭೇಟಿ ನೀಡಿ ವಾಸ್ತವಾಂಶ ಕಲೆ ಹಾಕಿದರು. ಇದೇ ವೇಳೆ ಪೆರ್ನೆ ಗ್ರಾಪಂ ಸದಸ್ಯ ನವೀನ್ ಕುಮಾರ್ ಪದಬರಿ ಪೆರಮೊಗ್ರುನಲ್ಲಿ ಕ್ರಾಸಿಂಗ್ ಇದ್ದು, ಅಲ್ಲಿನ ಕೇವಲ ೫೦೦ ಮೀಟರ್ ದೂರದ ಸತ್ತಿಕಲ್ಲಿನಲ್ಲಿ ಕ್ರಾಸಿಂಗ್ ನೀಡಿ ಪೆರ್ನೆ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷಿಸಿರುವುದಾಗಿ ಆರೋಪಿಸಿದರು.ಪೆರ್ನೆ ಗ್ರಾಮದಲ್ಲಿ ಕ್ರಾಸಿಂಗ್ ನೀಡದಿದ್ದರೆ ಶಾಲೆ ಕಾಲೇಜು, ರಾಷ್ಟ್ರೀಕೃತ ಬ್ಯಾಂಕ್ ಸಹಿತ ಧಾರ್ಮಿಕ ಕೇಂದ್ರದ ಜೊತೆಗೆ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಮೆಡಿಕಲ್ ಕಾಲೇಜಿಗೆ ತೆರಳುವವರಿಗೆ ತೊಂದರೆಯಾಗಲಿದ್ದು, ನಿಯೋಗಕ್ಕೆ ಮನವರಿಕೆ ಮಾಡಿದರು.

ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪ್ರಕಾಶ ನಾಯಕ್, ಶಿವಪ್ಪ, ಗೋಪಾಲ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು.