ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ರಾಜ್ಯ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಲು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವ ಆದೇಶ ತಂದಿದೆ. ಇದರಿಂದ ಹಿಂದು-ಮುಸ್ಲಿಮರ ನಡುವೆ ಕಾಂಗ್ರೆಸ್ ಬೆಂಕಿ ಹಚ್ಚಿ ಕೋಮುಸೌಹಾರ್ದತೆಗೆ ಧಕ್ಕೆ ತಂದಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.ನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ನಿಷೇಧ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ, ಆತುರದಲ್ಲಿ ಸರ್ಕಾರ ಹಿಜಾಬ್‌ಗೆ ಅವಕಾಶ ನೀಡಿರುವುದು ನ್ಯಾಯಾಲಯಕ್ಕೆ ಮಾಡುವ ಅಪಚಾರವಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅನುಮತಿ ನೀಡುವುದರಿಂದ ವಿದ್ಯಾರ್ಥಿಗಳ ನಡುವೆ ಸಹೋದರತ್ವಕ್ಕೆ ಧಕ್ಕೆಯಾಗುತ್ತದೆ ಮತ್ತು ಇದು ಬಹುಸಂಖ್ಯಾತರನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ತಂತ್ರವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಾಚಿಕೆಗೇಡಿನ ಸಮಾವೇಶ. ಅವರಿಗೆ ಸಾಧನೆ ರಾಜ್ಯದ ಜನತೆಗೆ ವೇದನೆ ಆಗಿದೆ. ಸರ್ಕಾರದ ಮೂರು ವರ್ಷಗಳ ಸಾಧನೆ ಶೂನ್ಯ. ಸಾಧನೆ ಏನು ಎಂಬುದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೇಳಿಲ್ಲ. ಕಾಂಗ್ರೆಸ್ ಸರ್ಕಾರ ಕಳ್ಳರ ಸಂತೆಯಾಗಿದೆ. ಪ್ರಶ್ನಿಸುವವರು ಯಾರೂ ಇಲ್ಲ. ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡುವುದು ಅವರ ಉದ್ದೇಶವಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ. ಗೃಹಲಕ್ಷ್ಮಿ 6 ತಿಂಗಳಿಗೆ ಕೊಡುತ್ತಿದ್ದಾರೆ. ಫೆಬ್ರವರಿ ತಿಂಗಳದ್ದು ಇನ್ನೂ ಕೊಟ್ಟಿಲ್ಲ ಎಂದು ಹರಿಹಾಯ್ದರು.ಕಾಮಗಾರಿಗಳ ಬಾಕಿ ಪಾವತಿಯಲ್ಲಿ ಗುತ್ತಿಗೆದಾರರಿಗೆ 37,000 ಕೋಟಿ ರು. ಗಳ ಬಾಕಿ ಪಾವತಿಗಳು ಉಳಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಂಬಂಧಿಸಿದ ಮುಡಾ ಹಗರಣ ಕಾಂಗ್ರೆಸ್ ಸರ್ಕಾರದ ದೊಡ್ಡ ಭ್ರಷ್ಟಾಚಾರ ಆರೋಪವಾಗಿ ಪರಿಣಮಿಸಿತು. ಎಸ್‌ಸಿ/ಎಸ್ ನಿಧಿಗಳ ಎಸ್ ಸಿಪಿ, ಟಿಎಸ್ ಪಿ ನಿಧಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು,ಕೊಲೆ, ದರೋಡೆ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಉಪಾಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಬಿ. ಮುರಳಿ, ಮಾಧ್ಯಮ ಸಂಚಾಲಕ ವಿ. ಮಧುಚಂದ್ರ, ಮುಖಂಡರಾದ ಎ.ಬಿ. ಬೈರೇಗೌಡ, ಲಕ್ಷ್ಮಿಪತಿ, ಆರ್. ಎನ್. ಅಶೋಕ್, ಬಾಲಕುಂಟೆ ಗಂಗಾಧರಪ್ಪ, ಪ್ರಭಾಕರ್ ರೆಡ್ಡಿ, ತೇಜೇಂದ್ರ ಪಾಪು, ಲಕ್ಷ್ಮೀನಾರಾಯಣ ಗುಪ್ತ, ನರೇಂದ್ರಬಾಬು ಮತ್ತಿತರರು ಇದ್ದರು.
ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ಛಲವಾಧಿ ನಾರಾಯಣಸ್ವಾಮಿ ಮಾತನಾಡಿದರು.