ಹಿಜಾಬ್‌: ಸಿದ್ದರಾಮಯ್ಯ ಮೂರ್ಖತನದ ಹೇಳಿಕೆ

| Published : Dec 25 2023, 01:30 AM IST / Updated: Dec 25 2023, 01:31 AM IST

ಸಾರಾಂಶ

ಹಿಜಾಬ್‌ ವಿಷಯದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಇಲ್ಲದ ಹಿಜಾಬ್‌ ಆದೇಶ ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

- ಬಹುಶಃ ರಾಹುಲ್‌ ಗಾಂಧಿ ಸಹವಾಸ ದೋಷ ಇರಬಹುದು-ಜೋಶಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹಿಜಾಬ್‌ ವಿಷಯದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಇಲ್ಲದ ಹಿಜಾಬ್‌ ಆದೇಶ ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಹೀಗೆ ಮಾತಾಡ್ತಾ ಇದ್ದಾರೆ. ನೀವು ಗೊತ್ತಿದ್ದು ಮಾತನಾಡುತ್ತಿದ್ದರೆ ಸಮಾಜಕ್ಕೆ ಮಾಡುವ ಅನ್ಯಾಯ. ಗೊತ್ತಿಲ್ಲದೇ ಹೇಳಿದ್ದರೆ ನೀವು ಮುಖ್ಯಮಂತ್ರಿ ಕುರ್ಚಿಗೆ ಅನರ್ಹರು ಎಂದರು.

ಮಿಸ್ಟರ್ ಸಿದ್ದರಾಮಯ್ಯ ಎಲ್ಲಿ ಹಿಜಾಬ್ ಬ್ಯಾನ್ ಇದೆ? ಎಂದು ವ್ಯಂಗ್ಯವಾಡಿದ ಅವರು, ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಬಂದಾಗಿನಿಂದ ಈ ರೀತಿ ಮೂರ್ಖರಂತೆ ಹೇಳಿಕೆ ನೀಡುತ್ತಿದ್ದಾರೆ. ಬಹುಶಃ ರಾಹುಲ್‌ ಗಾಂಧಿ ಸಹವಾಸ ದೋಷ ಇರಬಹುದು ಎಂದರು.

ತುಷ್ಟೀಕರಣದ ಮೂಲಕ ಮತ ಪಡೆಯುವ ಹುನ್ನಾರ ಇದು. ಮುಸ್ಲಿಂ ಬಾಂಧವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಹೇಳುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕಿದ್ದರು ಎಂಬ ಹೇಳಿಕೆಗೆ ಬಿ.ಕೆ. ಹರಿಪ್ರಸಾದ ಹೇಳಿಕೆ ಕಿಡಿಕಾರಿದ ಜೋಶಿ, ಕಾಂಗ್ರೆಸ್‌ನಲ್ಲಿ ಹರಿಪ್ರಸಾದ್‌ರನ್ನು ಬೂಟಕ್ಕಿಂತ ಕಡೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಅವರ ಭಾಷೆಯಲ್ಲಿ ನನಗೆ ಉತ್ತರ ಕೊಡುವುದಕ್ಕೆ ಬರಲ್ಲ. ಆದರೆ ಅವರನ್ನು ಬೂಟ್‌ಗಿಂತ ಕಡೆ ಮಾಡಿದ್ದಾರೆ. ಅದಕ್ಕೆ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆಗೂ ಕಿಡಿಕಾರಿದ ಅವರು, ಗಾಂಧೀಜಿಯವರ ಹತ್ಯೆಯಾದ ನಂತರ ಆರ್‌ಎಸ್ಎಸ್ ಮೇಲೆ ನಿರ್ಬಂಧ ಹಾಕಿದ್ದರು. ನಂತರ ಕಾಂಗ್ರೆಸ್ ಸರ್ಕಾರವೇ ನಿರ್ಬಂಧ ವಾಪಸ್ ಪಡೆಯಿತು. ಯಾಕೆ ನಿರ್ಬಂಧ ವಾಪಸ್ ಪಡೆಯಿತು ಎಂದು ಪ್ರಶ್ನಿಸಿದರಲ್ಲದೇ, ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಹತಾಶೆಯಿಂದ ಹರಿಪ್ರಸಾದ್ ಈ ರೀತಿ ಮಾತನಾಡುತ್ತಿದ್ದಾರೆ. ನೀವೇನು ಮಾಡಿದರೂ ಸಿದ್ದರಾಮಯ್ಯ ನಿಮ್ಮನ್ನು ಮಂತ್ರಿ ಮಾಡುವುದಿಲ್ಲ. ಡಿ.ಕೆ. ಶಿವಕುಮಾರ ಸಹ ನಿಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸೋನಿಯಾ ಗಾಂಧಿ ನಿಮ್ಮನ್ನು ಮಂತ್ರಿ ಮಾಡಿ ಎಂದು ಹೇಳಲ್ಲ. ಯಾಕೆ ಸುಮ್ಮನೆ ಹುಚ್ಚುಚ್ಚಾಗಿ ಮಾತನಾಡುತ್ತೀರಿ. ಈ ರೀತಿ ಅಸಭ್ಯ, ಅಸಾಂಸ್ಕೃತಿಕವಾಗಿ ಮಾತನಾಡುವುದನ್ನು ಬಿಡಿ ಎಂದು ಹರಿಪ್ರಸಾದಗೆ ಸಲಹೆ ಮಾಡಿದರು.