ಶ್ರೀಶೈಲಕ್ಕೆ ಪಾದಯಾತ್ರೆ, ದಾರಿಯುದ್ದಕ್ಕೂ ಸೇವೆ

| Published : Mar 18 2025, 12:33 AM IST

ಸಾರಾಂಶ

ದೋಟಿಹಾಳದ ಶುಖಮುನಿ ತಾತನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ 19ನೇ ವರ್ಷದ ಪಾದಯಾತ್ರೆ ಆರಂಭಿಸಿದ್ದಾರೆ. ಯುಗಾದಿ ಹಬ್ಬದ ವೇಳೆ ಶ್ರೀಶೈಲ ಮಲ್ಲಯ್ಯನ ಜಾತ್ರೆಗೆ ದೋಟಿಹಾಳ, ಕೇಸೂರ, ಕಲಕೇರಿ, ಬಿಜಕಲ್, ಮುದೇನೂರ, ಜಾಲಿಹಾಳ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಎಲ್ಲಿ ನೋಡಿದರಲ್ಲಿ ಭಕ್ತರ ದಂಡು, ಓಂ ನಮಃ ಶಿವಾಯ, ಉಘೇ ಉಘೇ ಮಲ್ಲಯ್ಯ ಎಂಬ ಜಯಘೋಷ, ಮಂತ್ರ ಪಠಣ, ಪಾದಯಾತ್ರಿಗಳ ಸೇವೆ ಮಾಡುವುದೇ ಒಂದು ಭಾಗ್ಯವೆಂದು ರಸ್ತೆಯುದ್ದಕ್ಕೂ ಉಪಹಾರ, ಹಣ್ಣು-ಹಂಪಲು ನೀಡುತ್ತಿರುವ ಭಕ್ತರು.

ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮದ ನೂರಾರು ಭಕ್ತರು ಶ್ರೀಶೈಲ ಮಲ್ಲಯ್ಯನಿಗೆ ಪಾದಯಾತ್ರೆ ಹೊರಟಿದ್ದಾರೆ. ದೋಟಿಹಾಳದ ಶುಖಮುನಿ ತಾತನ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ 19ನೇ ವರ್ಷದ ಪಾದಯಾತ್ರೆ ಆರಂಭಿಸಿದ್ದಾರೆ. ಯುಗಾದಿ ಹಬ್ಬದ ವೇಳೆ ಶ್ರೀಶೈಲ ಮಲ್ಲಯ್ಯನ ಜಾತ್ರೆಗೆ ದೋಟಿಹಾಳ, ಕೇಸೂರ, ಕಲಕೇರಿ, ಬಿಜಕಲ್, ಮುದೇನೂರ, ಜಾಲಿಹಾಳ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಕೈಗೊಂಡಿರುವುದು ವಿಶೇಷ.

ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ದಾರಿಯುದ್ದಕ್ಕೂ ಸಿರಿಗಿರಿಯ ಮಲ್ಲಯ್ಯನಿಗೆ ಜೈ ಎಂದು ಜೈಕಾರ ಹಾಕುತ್ತ, ಭಕ್ತಿಯ ಉನ್ಮಾದ ಹಾಗೂ ಹೊಸ ಚೈತನ್ಯದೊಂದಿಗೆ ಶ್ರೀಶೈಲ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇವರಿಗೆ ಮಾರ್ಗ ಮಧ್ಯ ಹಲವು ಭಕ್ತರು ಅನ್ನ ಪ್ರಸಾದದ ವ್ಯವಸ್ಥೆ ಹಾಗೂ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ನಿತ್ಯ 50-60 ಕಿಮೀ ದೂರ ಕ್ರಮಿಸಿ, 11 ದಿನದ ಒಳಗೆ 550 ಕಿಮೀ ದೂರದ ಶ್ರೀಶೈಲ ಮಲ್ಲಯ್ಯನ ಕ್ಷೇತ್ರ ತಲುಪುತ್ತಾರೆ.

ಪಾದಯಾತ್ರೆ ಮಾರ್ಗ:

ರಾಜ್ಯದ ಬಯಲು ಸೀಮೆಯ ನಂತರ ಆಂಧ್ರಪ್ರದೇಶದ ಗಡಿದಾಟಿ ಐದಾರು ದಿನ ಕಳೆದ ನಂತರ ಸಿದ್ದಪುರಂ ಬಳಿ ಕಡೆ ಬಾಗಿಲಿನ ವೀರಭದ್ರೇಶ್ವರ ದೇವರ ದರ್ಶನ ಪಡೆಯುತ್ತಾರೆ. ಬಳಿಕ ಗಿರಿಯ ಬೆಟ್ಟ ಏರಿ ಚಾರಣ ಮಾಡಬೇಕು. ಅಂಬಲಿಹಳ್ಳ, ಗಂಗನಹಳ್ಳಿ ನಂತರ ಮಲ್ಲಯ್ಯನ ಬಾವಿ ನೀರು ಕುಡಿದು ಭೀಮನಕೊಳ್ಳ ದಾಟಿ, ಕೈಲಾಸ ಬಾಗಿಲ ಸಮೀಪಕ್ಕೆ ಹೋದಾಗ ಸ್ವರ್ಗವೇ ಹತ್ತಿರದಲ್ಲಿದೆ ಎಂದು ಭಾಸವಾಗುತ್ತದೆ. ಸ್ವಲ್ಪ ದಾರಿಯಲ್ಲಿ ಸಾಗಿದ ನಂತರ ಸಿಗುವುದೇ ಶ್ರೀಶೈಲ ಮಲ್ಲಯ್ಯನ ದೇವಸ್ಥಾನ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಹೇಳುತ್ತಾರೆ.

ಪಾದಯಾತ್ರಿಗಳಿಗೆ ಸೇವೆ:

ಪಾದಯಾತ್ರಿಗಳಿಗಾಗಿ ಉಪಹಾರ, ಹಣ್ಣು-ಹಂಪಲು, ಮಜ್ಜಿಗೆ, ಶರಬತ್ತು ಸೇವೆ ಮಾಡುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸುತ್ತಾರೆ. ದೋಟಿಹಾಳದಿಂದ ಶ್ರೀಶೈಲ ವರೆಗೂ ಪ್ರಸಾದ ಸೇವೆ ಇರುತ್ತದೆ. ಮಾರ್ಗದುದ್ದಕ್ಕೂ ಚಹಾ, ಚೂಡಾ, ಭಜ್ಜಿ, ಉಪ್ಪಿಟ್ಟು, ಅವಲಕ್ಕಿ, ಬದಾಮಿ ಹಾಲು, ಮಜ್ಜಿಗೆ, ಹಣ್ಣು-ಹಂಪಲುಗಳ ವ್ಯವಸ್ಥೆ ಮಾಡುತ್ತ ಮಲ್ಲಯ್ಯನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ. ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಿಂದ ಮಲ್ಲಯ್ಯನ ಭಕ್ತರು 19ನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದೇವೆ. ಪಾದಯಾತ್ರೆ ಸಾಗುವ ದಾರಿ ಮಧ್ಯದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. 10 ದಿನಗಳಲ್ಲಿ ಶ್ರೀಶೈಲ ತಲುಪುತ್ತೇವೆ ಎಂದು ಶ್ರೀಶೈಲಮಲ್ಲಯ್ಯನ ಭಕ್ತರು ಹೇಳಿದ್ದಾರೆ.