ರಾಮನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ಹಬ್ಬ. ಇದೇ ಸಂಭ್ರಮದ ವೇದಿಕೆಯಲ್ಲಿ ರಾಮನಗರದ ಇಬ್ಬರು ಪುಟಾಣಿಗಳು ಧರಿಸಿದ ರಾಧೆ-ಕೃಷ್ಣರ ವೇಷ ಎಲ್ಲರ ಗಮನ ಸೆಳೆದಿದ್ದಲ್ಲದೆ, ಧರ್ಮದ ಗಡಿಗಳನ್ನು ಮೀರಿದ ಸ್ನೇಹ-ಸೌಹಾರ್ದದ ಅಪೂರ್ವ ಸಂದೇಶವನ್ನೂ ಸಾರಿತು
ರಾಮನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ಹಬ್ಬ. ಇದೇ ಸಂಭ್ರಮದ ವೇದಿಕೆಯಲ್ಲಿ ರಾಮನಗರದ ಇಬ್ಬರು ಪುಟಾಣಿಗಳು ಧರಿಸಿದ ರಾಧೆ-ಕೃಷ್ಣರ ವೇಷ ಎಲ್ಲರ ಗಮನ ಸೆಳೆದಿದ್ದಲ್ಲದೆ, ಧರ್ಮದ ಗಡಿಗಳನ್ನು ಮೀರಿದ ಸ್ನೇಹ-ಸೌಹಾರ್ದದ ಅಪೂರ್ವ ಸಂದೇಶವನ್ನೂ ಸಾರಿತು.
ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ಶ್ರೀಕೃಷ್ಣ ಹಾಗೂ ರಾಧೆ ವೇಷ ಸ್ಪರ್ಧೆಯಲ್ಲಿ, ಸಾಂಸ್ಕೃತಿಕ ಚಿಂತಕ, ಕನ್ನಡ ಪರಿಚಾರಕ, ರಂಗಭೂಮಿ ಕಲಾವಿದ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ನಗರಸಭೆ ಸದಸ್ಯ ಕನ್ನಡ ಸಮದ್ ಅವರ ಮೊಮ್ಮಗಳು ಜೂಬಿಯಾ ಅಹಮದ್, ಬಾಲ ರಾಧೆಯಾಗಿ ಕಂಗೊಳಿಸಿದರೆ, ಅವರ ನೆರೆಮನೆಯ ಬಾಲಕಿ ನಿಶ್ಚಿತಾಗೌಡ, ಬಾಲಕೃಷ್ಣನ ವೇಷದಲ್ಲಿ ಮಿಂಚಿದರು.ರಾಧೆಯ ಸಾಂಪ್ರದಾಯಿಕ ಅಲಂಕಾರದಲ್ಲಿ ಜೂಬಿಯಾ, ಕೃಷ್ಣನ ಮೋಹಕ ವೇಷದಲ್ಲಿ ನಿಶ್ಚಿತಾಗೌಡ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ನೆರೆದಿದ್ದವರ ಗಮನ ಇವರತ್ತ ಹರಿಯಿತು. ಇಬ್ಬರೂ ಪುಟ್ಟ ವಯಸ್ಸಿನಲ್ಲೇ ಧಾರ್ಮಿಕ ಸೌಹಾರ್ದದ ದೊಡ್ಡ ಸಂದೇಶವನ್ನು ತಮ್ಮ ಮುಗ್ಧ ಅಭಿನಯದ ಮೂಲಕ ಸಾರಿದರು.
ಒಬ್ಬರದು ಮುಸ್ಲಿಂ ಕುಟುಂಬ, ಮತ್ತೊಬ್ಬರದು ಹಿಂದೂ ಕುಟುಂಬ. ಆದರೆ ವೇದಿಕೆಯ ಮೇಲೆ ಧರ್ಮದ ಪರಿಚಯವೇ ಇರಲಿಲ್ಲ; ಅಲ್ಲಿ ರಾಧೆ-ಕೃಷ್ಣರ ಸ್ನೇಹ ಮಾತ್ರ ಇತ್ತು. ಇದೇ ಈ ಪುಟ್ಟ ಬಾಲಕಿಯರ ವೇಷಧಾರಣೆಯ ವಿಶೇಷತೆಯಾಗಿತ್ತು.ಧರ್ಮ, ಜಾತಿ, ಭಾಷೆಗಳ ಹೆಸರಿನಲ್ಲಿ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿರುವ ಸಂದರ್ಭದಲ್ಲಿ, ರಾಮನಗರದ ಈ ಇಬ್ಬರು ಪುಟಾಣಿಗಳು ತಮ್ಮ ಮುಗ್ಧ ನಗುವಿನೊಂದಿಗೆ ‘ಹಿಂದೂ-ಮುಸ್ಲಿಂ ಭಾಯಿ ಭಾಯಿ’ ಎಂಬ ಸೌಹಾರ್ದದ ಸಂದೇಶವನ್ನು ಸಾರಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಕೃಷ್ಣನ ಬಣ್ಣದಲ್ಲಿ ನಿಶ್ಚಿತಾಗೌಡ, ರಾಧೆಯ ರೂಪದಲ್ಲಿ ಜೂಬಿಯಾ ಅಹಮದ್—ಇವರಿಬ್ಬರ ಸ್ನೇಹದ ಚಿತ್ರಣವು ‘ಧರ್ಮ ಬೇರೆ, ಭಾವನೆ ಒಂದೇ’ ಎಂಬ ಸಂದೇಶವನ್ನು ಸಾರುವಂತಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಮಕ್ಕಳ ವೇಷಭೂಷಣವನ್ನು ಮೆಚ್ಚಿ, ಇಬ್ಬರನ್ನೂ ಅಭಿನಂದಿಸಿದರು.ಸೌಹಾರ್ದಕ್ಕೆ ದೊಡ್ಡ ದೊಡ್ಡ ಭಾಷಣಗಳ ಅಗತ್ಯವಿಲ್ಲ. ಪುಟ್ಟ ಮಕ್ಕಳ ಮುಗ್ಧ ಮನಸ್ಸೇ ಸಾಕು ಎಂಬುದಕ್ಕೆ ರಾಮನಗರದ ಈ ಕೃಷ್ಣಾಷ್ಟಮಿ ಕಾರ್ಯಕ್ರಮ ಸಾಕ್ಷಿಯಾಯಿತು.
-----------------------4ಕೆಆರ್ ಎಂಎನ್ 4.ಜೆಪಿಜಿ
ಬಾಲ ರಾಧೆಯಾಗಿ ಜೂಬಿಯಾ ಅಹಮದ್ ಮತ್ತು ಬಾಲಕೃಷ್ಣನ ವೇಷದಲ್ಲಿ ಬಾಲಕಿ ನಿಶ್ಚಿತಾಗೌಡಕಂಗೊಳಿಸಿದರು.
------------------------