ಸಾರಾಂಶ
ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ಸರ್ಕಲ್ ಬಳಿ ಸೋಮವಾರ, ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನೆರವೇರಿತು.
ಕನ್ನಡಪ್ರಭ ವಾರ್ತೆ ಪುತ್ತೂರುಹಿಂದೂ ಸಂಘಟನೆಗಳ ಮುಖಂಡರ ಮನೆಗೆ ರಾತ್ರಿ ವೇಳೆಗೆ ಪೊಲೀಸರು ನುಗ್ಗಿ ಫೋಟೋ ತೆಗೆದು ಕಿರುಕುಳ ನೀಡಲಾಗುತ್ತಿದೆ. ರಾಜ್ಯ ಸರ್ಕಾರವು ಹಿಂದೂ ಕಾರ್ಯಕರ್ತರನ್ನು ದಮನಿಸುವ ಕೆಲಸದಲ್ಲಿ ನಿರತವಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಂಘಟನೆಗಳು ಬೆದರುತ್ತಿಲ್ಲ. ಸರ್ಕಾರ ಇಂತಹ ಕೆಲಸವನ್ನು ಕೂಡಲೇ ನಿಲ್ಲಿಸದಿದ್ದಲ್ಲಿ ಪರಿಣಾಮ ಘೋರವಾಗಿರುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಅಜಿತ್ ಕೊಡಗು ಎಚ್ಚರಿಕೆ ನೀಡಿದ್ದಾರೆ.ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಪುತ್ತೂರಿನ ದರ್ಬೆ ಸರ್ಕಲ್ ಬಳಿ ಸೋಮವಾರ, ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ಕಾರ್ಯಕರ್ತರನ್ನು ಯಾವುದೇ ಕಾರ್ಯಕ್ರಮಕ್ಕೆ ಹೋಗದಂತೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದೆ. ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇಸ್ಲಾಮಿಕ್ ಒಟ್ ಬ್ಯಾಂಕ್ ಗಾಗಿ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಇಲ್ಲಿನ ಶಾಸಕರು ಹೋರಾಟ ಮಾಡುವವರು ಬಾಲ ಮುದುರಿ ಕುಳಿತಿದ್ದಾರೆ ಎಂದು ಗೇಲಿ ಮಾಡುತ್ತಿದ್ದು, ಹಿಂದೂ ಸಮಾಜವನ್ನು ಗೇಲಿ ಮಾಡಿದರೆ ನಿಮ್ಮ ಅಸ್ತಿತ್ವನ್ನು ಉಳಿಸಿಕೊಳ್ಳುವುದು ಕಷ್ಟವಿದೆ. ಯಾವುದೇ ಕಮಿಷನರ್, ಎಸ್ಪಿ ಬಂದಿದ್ದರೂ ನಾವು ಸಂವಿಧಾನ ಮತ್ತು ಕಾನೂನಿಗೆ ಗೌರವ ನೀಡುವವರು ಎಂದರು.ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ ದಾಸ್ ಕಾಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕ ಹಿಂದು ವಿರೋಧಿ ಧೋರಣೆ ಮಾಡುತ್ತಾ ಬಂದಿದೆ. ಭ್ರಷ್ಟ ಮತ್ತು ಹಿಂದು ವಿರೋಧಿ ನೀತಿ ಅನುಸರಿಸಿ ಕರಾವಳಿಯ ಎಲ್ಲಾ ಹಿಂದು ಸಂಘಟನೆಯ ನಾಯಕರ ವಿರುದ್ದ ಕೇಸು ದಾಖಲಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.ಹಿಂ.ಜಾ.ವೇ. ನಿಧಿ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ದಿನೇಶ್ ಪಂಜಿಗ ಕಾರ್ಯಕ್ರಮ ನಿರ್ವಹಿಸಿದರು. ಹಿಂದು ಜಾಗರಣ ವೇದಿಕೆಯ ಹಲವಾರು ಮುಖಂಡರು, ಬಿಜೆಪಿ ಪ್ರಮುಖರು, ಪರಿವಾರ ಸಂಘಟನೆಗಳು ಪ್ರತಿಭಟನೆಯಲ್ಲಿದ್ದರು.