ಹೊಸಪೇಟೆಯಲ್ಲಿ ಹಿಂದೂ ಮಹಾಗಣಪತಿ ಭವ್ಯ ಮೆರವಣಿಗೆ

| Published : Sep 17 2024, 12:52 AM IST

ಸಾರಾಂಶ

ಹೊಸಪೇಟೆ ನಗರದಲ್ಲಿ ಹಿಂದೂ ಮಹಾಗಣಪತಿ‌ ವಿಸರ್ಜನಾ ಮಹೋತ್ಸವ ಅದ್ಧೂರಿಯಾಗಿ ಭಾನುವಾರ ನೆರವೇರಿತು. ಸಾವಿರಾರು ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಹೊಸಪೇಟೆ: ನಗರದಲ್ಲಿ ಹಿಂದೂ ಮಹಾಗಣಪತಿ‌ ವಿಸರ್ಜನಾ ಮಹೋತ್ಸವ ಅದ್ಧೂರಿಯಾಗಿ ಭಾನುವಾರ ನೆರವೇರಿತು. ಸಾವಿರಾರು ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಹಿಂದೂ ಮಹಾಗಣಪತಿ ಸ್ವಾಗತ ಸಮಿತಿಯಿಂದ ನಗರದ ಮೇನ್ ಬಜಾರ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಡಿಜೆ ಸದ್ದಿಗೆ ಯುವಕರು, ಯುವತಿಯರು ಹೆಜ್ಜೆ ಹಾಕಿದರು. ನಗರದ ಮೇನ್ ಬಜಾರ್‌ನಿಂದ ಆರಂಭವಾಗಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ನಗರದ ದೊಡ್ಡ ಮಸೀದಿಯ ಮಾರ್ಗವಾಗಿ, ಗಾಂಧಿಚೌಕ್, ಸಂಗೊಳ್ಳಿ ರಾಯಣ್ಣ ವೃತ್ತ, ಪುಣ್ಯ ಮೂರ್ತಿವೃತ್ತ, ಕೇಂದ್ರ ಬಸ್ ನಿಲ್ದಾಣ, ಸ್ಟೇಷನ್‌ ರಸ್ತೆ ಮೂಲಕ ಸಾಗಿತು. ತುಂಗಭದ್ರಾ ಎಲ್‌ಎಲ್‌ಸಿಯಲ್ಲಿ ಕ್ರೇನ್ ಮೂಲಕ ಗಣಪತಿ ವಿಸರ್ಜನೆ ಮಾಡಲಾಯಿತು.

ವಿಸರ್ಜನಾ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ‌ಪಾಷಾ ಸ್ಥಳಕ್ಕೆ ಆಗಮಿಸಿ ಬಂದೋಬಸ್ತ್ ಪರಿಶೀಲಿಸಿದರು.

ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ನಗರದ ಹಲವು ಕಡೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ತಿರುಪತಿ ತಿಮ್ಮಪ್ಪ ಗಣೇಶನ ವಿಸರ್ಜನಾ ಮೆರವಣಿಗೆ:

ಕಂಪ್ಲಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಹತ್ತಿರ ಕಾಳಿಕಾ ದೇವಿ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ತಿರುಪತಿ ತಿಮ್ಮಪ್ಪನ ಪ್ರಮೋತ್ಸವ ವಿನಾಯಕನ ವಿಸರ್ಜನಾ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ತಿರುಪತಿ ತಿಮ್ಮಪ್ಪನ ಪ್ರಮೋತ್ಸವ ಪಲ್ಲಕ್ಕಿಯಲ್ಲಿ ವಿನಾಯಕನನ್ನು ವಿಶೇಷವಾಗಿ ಅಲಂಕರಿಸಿ, ಕಾಳಿಕ ದೇವಿ ದೇವಸ್ಥಾನದಿಂದ ನಡುವಲ ಮಸೀದಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತುಂಗಭದ್ರಾ ನದಿಯ ವರೆಗೂ ಕಂಚಿ ಮೇಳದೊಂದಿಗೆ ಬ್ರಹ್ಮೋತ್ಸವದ ರೀತಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು.ಈ ಸಂದರ್ಭದಲ್ಲಿ ಕಾಳಿಕಾ ದೇವಿ ಗಜಾನನ ಯುವಕ ಮಂಡಳಿ ಅಧ್ಯಕ್ಷರು, ಸದಸ್ಯರು ಇದ್ದರು.