ರಾಷ್ಟ್ರದಲ್ಲಿ ಅತ್ಯುತ್ತಮ ರಾಜ್ಯ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ

ಕುಕನೂರು: 13 ವರ್ಷದ ಪ್ರಧಾನಿ ನರೇಂದ್ರ ಮೋದಿ ಆಡಳಿತ ಹಾಗೂ ಸಿಎಂ ಸಿದ್ದರಾಮಯ್ಯ ಆಡಳಿತ ಹೊಂದಾಣಿಕೆ ಮಾಡಿದರೆ 2.5 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಹೆಚ್ಚು ಅಭಿವೃದ್ಧಿ ಕಾರ್ಯ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಹರಿಶಂಕರ ಬಂಡಿ, ಚನ್ನಪ್ಪನಹಳ್ಳಿ ಹಾಗೂ ನಾನಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿರೋಧ ಪಕ್ಷದವರು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡುವುದಿಲ್ಲ. ಹಿಂದೂ, ಮುಸ್ಲಿಂ ಭಾಷಣದಿಂದ ಏನೂ ಪ್ರಯೋಜನ ಇಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕು ಎಂದರು.

ರಾಷ್ಟ್ರದಲ್ಲಿ ಅತ್ಯುತ್ತಮ ರಾಜ್ಯ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಬಡತನದಲ್ಲಿ ಬೆಳೆದ ಸಿದ್ದರಾಮಯ್ಯ ಬಡಜನರ ಬಗ್ಗೆ ಕಳಕಳಿ ವ್ಯಕ್ತಿ ಹೊಂದಿರುವ. 1985 ರ ಕಾಲಘಟ್ಟದಲ್ಲಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿರುವುದರಿಂದ ಜನಪರ ಕಾರ್ಯ ಆಗುತ್ತಿವೆ.ಇತ್ತೀಚೆಗೆ ಬಾಯಿಗೆ ಬಂದಂಗೆ ಮಾತನಾಡುತ್ತಿರುವ ರಾಜಕಾರಣಿಗಳು ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಬೇಕು. ರಾಜ್ಯದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಹೆಚ್ಚಳವಾಗಿದೆ. ಕುಂಠಿತವಾಗಿಲ್ಲ ಎಂದರು.

ಪ್ರಧಾನಿ ಮನಮೋಹನ ಸಿಂಗ್ ಆಹಾರ ಭದ್ರತೆ ಯೋಜನೆ ಜಾರಿಗೆ ಮಾಡಿದ್ದರಿಂದ ಎಲ್ಲರಿಗೂ ಉಚಿತ ಆಹಾರ ಧಾನ್ಯ ಸಿಕ್ಕು ಹಸಿವಿನಿಂದ ಬಳಲುವುದು ಕಡಿಮೆಯಾಗಿದೆ. ರಾಜ್ಯದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆ ಬೇರೆ ಯಾವ ರಾಜ್ಯದಲ್ಲೂ ಜಾರಿ ಇಲ್ಲ.ಕರ್ನಾಟಕದಲ್ಲಿ ಮಾತ್ರ ಇದೆ. 1.24 ಕೋಟಿ ಮಹಿಳೆಯರಿಗೆ ₹30 ಸಾವಿರ ಕೋಟಿ ಹಣ ಗೃಹಲಕ್ಷ್ಮೀ ಯೋಜನೆಯಿಂದ ತಲುಪುತ್ತಿದೆ.

4.36 ಕೋಟಿ ಜನರಿಗೆ ಆಹಾರ ಧಾನ್ಯ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ 5 ಕೆಜಿ ಜತೆಗೆ 1ಕೆಜಿ ಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 1 ಕೆಜಿ ಎಣ್ಣೆ ವಿತರಿಸಲಾಗುತ್ತಿದೆ. 3.5 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಇಡೀ ವಿಶ್ವದಲ್ಲಿಯೇ ದಾಖಲೆ ಆಗುವಂತೆ ರಾಜ್ಯದಲ್ಲಿ ಇದುವರೆಗೆ 700 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ನಾಳೆ ಜ.12ಕ್ಕೆ ಶಕ್ತಿ ಯೋಜನೆ ಆರಂಭವಾಗಿ ಎರಡು ವರ್ಷ ಆಗಲಿದೆ. ಗೃಹಜ್ಯೋತಿ ಯೋಜನೆಯಲ್ಲಿ 1 ಕೋಟಿ 69 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಯಲ್ಲದೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ₹11ಸಾವಿರ ಕೋಟಿ ಹಣ ನೀಡುತ್ತಿದ್ದೇವೆ. ಅದರಲ್ಲಿ ಕೇಂದ್ರ ಸರ್ಕಾರ ಬರೀ ₹400 ಕೋಟಿ ಮಾತ್ರ ನೀಡುತ್ತಿದೆ. ಉಳಿದಿದ್ದು ರಾಜ್ಯ ಸರ್ಕಾರದ ಹಣ. ಶಾಲಾ ಮಕ್ಕಳ ಬಿಸಿಯೂಟ, ಶೂ,ಸಾಕ್ಸ್, ಪುಸ್ತಕಗಳಿಗೆ ಐದು ಸಾವಿರ ಕೋಟಿ, 36 ಲಕ್ಷ ರೈತರ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದರು.

ಉತ್ತರ ಕರ್ನಾಟಕ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಅಸಹಕಾರ ಇದೆ. ಇದರ ಬಗ್ಗೆ ಬೆಳಗಾವಿ ಕಲಾಪದಲ್ಲಿ ಮಾತನಾಡಿದ್ದೇನೆ,ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಸಹ ನೀಡಿಲ್ಲ. ಯುಕೆಪಿ ಯೋಜನೆ ಹಾಗೇ ನಿಂತಿದೆ,ನೀರಾವರಿ ಭಾಷಣ ಯಾರಾದರೂ ಮಾತನಾಡಿದರೆ ಅವರ ಸ್ವಂತ ಊರಿಗೆ ನೀರಾವರಿ ಮಾಡಿಕೊಂಡಿದ್ದೀರಾ ಎಂದು ಮೊದಲು ಕೇಳಿ ಎಂದು ಟೀಕಿಸಿದರು.

ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರು, ತಾಪಂ ಇಒ ಸಂತೋಷ ಬಿರಾದಾರ ಪಾಟೀಲ, ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ, ಪಂಚಾಯತ್ ರಾಜ್ ಇಲಾಖೆ ಎಇಇ ರಾಜಶೇಖರ ಮಳಿಮಠ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಅಶೋಕ ತೋಟದ, ಸಿದ್ದಯ್ಯ ಕಳ್ಳಿಮಠ, ಸಿರಾಜ್ ಕರಮುಡಿ, ಸಂಗಮೇಶ ಗುತ್ತಿ, ಹನುಮೇಶ ಕಡೇಮನಿ, ಬಸಯ್ಯ ಕರಡಿ, ನಾಗಯ್ಯ ಇತರರಿದ್ದರು.

ವಿದ್ಯುತ್ ನೀಡುವಂತೆ ರೈತರ ಒತ್ತಾಯ

ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಪಂಪಸೆಟ್ ಗಳಿಗೆ ಬೆಳಗ್ಗೆ ೪ ಗಂಟೆಗೆ ವಿದ್ಯುತ್ ನೀಡುವಂತೆ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಯರಡ್ಡಿ ಅವರು ಕೂಡಲೇ ನನ್ನ ಪಿಎಂ, ಸಿಎಂ ಮಾಡಿ ವಿದ್ಯುತ್ ಕೊಡುತ್ತೇನೆ. ಇಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಿರಿ ಎಂದು ಉತ್ತರಿಸಿದ್ದಾರೆ. ಇನ್ನೊಂದು ಎರಡು ವರ್ಷ ತಡೀರಿ ವಿದ್ಯುತ್ ಪುಲ್ ಇರುತ್ತದೆ ಎಂದು ಹೇಳಿದರು.