ಸಾರಾಂಶ
ಚಿಕಿತ್ಸೆ ಪಡೆದ ಬಳಿಕ ಮಸೀದಿಗೆ ಕರೆದುಕೊಂಡು ಬಂದಿದ್ದು, ಸುಮಾರು 2 ಗಂಟೆಗಳ ಕಾಲ ಮಸೀದಿಯಲ್ಲೇ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ವಿಷಯ ತಿಳಿದ ಈಶ್ವರಮಂಗಲದ ಸಂದೀಪ್ ಕಾರಂತ ಎಂಬವರು ಮಸೀದಿಗೆ ಬಂದು ರಘುರಾಮ ಭಟ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.
ಪುತ್ತೂರು : ಬೈಕ್ ಸ್ಕಿಡ್ ಆದ ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟು ಗಾಯಗೊಂಡ ಅರ್ಚಕರೊಬ್ಬರಿಗೆ ಮಸೀದಿಯಲ್ಲಿದ್ದ ಮಂದಿ ಮಸೀದಿಗೆ ಕರೆದೊಯ್ದು ಉಪಚರಿಸಿ, ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಘಟನೆಯೊಂದು ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಗಾಯಗೊಂಡವರು. ಇವರು ಬುಧವಾರ ಸಂಜೆ ಬೈಕ್ ಚಲಾಯಿಸಿಕೊಂಡು ಹೋಗುವಾಗ ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಪಲ್ಟಿಯಾಗಿತ್ತು.
ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟು ಕಾಲಿಗೆ ಗಾಯವಾಗಿತ್ತು. ರಕ್ತಸ್ರಾವಕ್ಕೊಳಗಾಗಿದ್ದ ರಘುರಾಮ ಭಟ್ ಅವರನ್ನು ಮಸೀದಿಯಲ್ಲಿದ್ದ ಮಂದಿ ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಅವರು ಗಾಯಾಳು ಅರ್ಚಕರನ್ನು ಸ್ಥಳೀಯ ಕ್ಲೀನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.