ಹುಬ್ಬಳ್ಳಿ:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಈಚೆಗೆ ನಡೆದ ಹೋರಾಟದ ವೇಳೆ ಹಿಂದೂ ಧರ್ಮ ಹಾಗೂ ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ "ಹುಬ್ಬಳ್ಳಿ ಯುವಕರು " ಸಂಘಟನೆ ನೇತೃತ್ವದಲ್ಲಿ ನಗರದ ಕೆಎಂಸಿಆರ್‌ಐ ಎದುರು ಪ್ರತಿಭಟನೆ ನಡೆಯಿತು.

ಹೋರಾಟದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದು ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ. ಭಾರತದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವಕ್ಕೆ ಇದರಿಂದ ಧಕ್ಕೆಯಾಗಿದೆ. ಹೋರಾಟಗಾರ್ತಿ ಅರುಂಧತಿ ರಾಯ್ ಸೇರಿ ಹಲವರು ಸಾರ್ವಜನಿಕ ವೇದಿಕೆಯಲ್ಲಿ ಹಿಂದೂ ಹಾಗೂ ಭಾರತ ವಿರೋಧಿ ಮಾತುಗಳನ್ನಾಡಿದ್ದಾರೆ. ಇದರಿಂದ ಭಾರತದ ಕೋಟ್ಯಂತರ ಜನರ ಭಾವನೆಗಳಿಗೆ ಗಾಸಿಯಾಗಿದೆ. ಹಿಂದೂ ಧರ್ಮಿಯರ ಮನಸ್ಸುಗಳಿಗೆ ನೋವುಂಟಾಗಿದೆ. ಇವರ ಭಾಷಣಗಳು ದೇಶದ ವಿಭಜನೆ, ದ್ವೇಷವನ್ನು ಉಂಟು ಮಾಡಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇಂಥ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮುನ್ನ ಸಂಬಂಧಿಸಿದ ಇಲಾಖೆಗಳು ಪರಿಶೀಲಿಸಬೇಕು. ವೇದಿಕೆಯಲ್ಲಿ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ತರುವಂತಿದ್ದರೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಇಂಥ ವಿರೋಧಿ ಮನಸ್ಸು ಹೊಂದಿದವರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಉತ್ತರ ವಿಭಾಗದ ಎಸಿಪಿ ಶಿವಾನಂದ ಚಲವಾದಿ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪ್ರಮುಖರಾದ ವಿಕ್ರಮ್ ಗಲಾಂಡೆ, ವಿನಾಯಕ ಬೆಂಕಿಶೆಟ್ಟರ್, ಜಯೇಶ ಕಬಾಡೆ, ಸಂಜಯ ಉದ್ನೂರ, ವಿಶಾಲ ಸಿಂಗ್ನಳ್ಳಿ, ಪ್ರೀತಂ ಪಾಟೀಲ, ಅಮಯ್ ನವಲಗುಂದಮಠ, ನಕುಲ ಮಲ್ಜಿ ಸೇರಿದಂತೆ ಹಲವರಿದ್ದರು.