ದೇಶಾದ್ಯಂತ ಹಿಂದೂ ಸಮ್ಮೇಳನ : ದೇಶದಲ್ಲಿ 83 ಸಾವಿರ ಶಾಖೆ

| N/A | Published : Oct 06 2025, 02:00 AM IST

ದೇಶಾದ್ಯಂತ ಹಿಂದೂ ಸಮ್ಮೇಳನ : ದೇಶದಲ್ಲಿ 83 ಸಾವಿರ ಶಾಖೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಮೇಲೆ ಸಾವಿರಾರು ವರ್ಷಗಳಿಂದ ಆಕ್ರಮಣಗಳು ನಡೆಯುತ್ತಲೆ ಇವೆ. ದೇಶದ ಗತವೈಭವ ಮರು ಪ್ರತಿಷ್ಠಾಪಿಸುವ, ದೇಶ ರಕ್ಷಣೆಗಾಗಿ ಹುಟ್ಟಿಕೊಂಡ ಆರ್‌ಎಸ್‌ಎಸ್‌ಗೆ ಶತಮಾನೋತ್ಸವ. ನಾಗಪುರದಲ್ಲಿ ಒಂದು ಶಾಖೆಯಿಂದ ಪ್ರಾರಂಭಗೊಂಡ ಆರ್‌ಎಸ್‌ಎಸ್‌, ಇದೀಗ ದೇಶದಲ್ಲಿ 83 ಸಾವಿರ ಶಾಖೆ ಹೊಂದಿದೆ.

ಹುಬ್ಬಳ್ಳಿ: ಶತಾಬ್ದಿ ಪೂರೈಸಿದ ಆರ್‌ಎಸ್‌ಎಸ್‌ನ ವಿರುದ್ಧ ಷಡ್ಯಂತ್ರ ಸಾಕಷ್ಟು ಬಾರಿ ನಡೆದಿರುವುದುಂಟು. ಇವುಗಳ ಮಧ್ಯೆಯೇ ದೇಶ, ಹಿಂದೂ ರಕ್ಷಣೆ ಜತೆಗೆ ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡು ಶಕ್ತಿಯುತವಾಗಿ ಬೆಳೆದಿದೆ. ಬೆಳೆಯುತ್ತಲೇ ಇರುತ್ತದೆ ಎಂದು ಆರ್‌ಎಸ್‌ಎಸ್ ದೆಹಲಿ ಕೇಂದ್ರ ಸಹ ಸರಕಾರ್ಯವಾಹ ಕೃಷ್ಣಗೋಪಾಲ ಅಭಿಪ್ರಾಯ ಪಟ್ಟರು.

ಇದೇ ವೇಳೆ ಶತಾಬ್ದಿ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂದೂ ಸಮ್ಮೇಳನ ಮಾಡಲು ಯೋಜಿಸಲಾಗಿದೆ. ಮಾದರಿಯ ಸ್ವಾವಲಂಬಿ ಭಾರತ ನಿರ್ಮಾಣವೇ ಸಂಘದ ಮುಖ್ಯಗುರಿ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಇಲ್ಲಿಯ ನೆಹರು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಬ್ಬಳ್ಳಿ ಮಹಾನಗರ ಘಟಕದ ವತಿಯಿಂದ ಆರ್‌ಎಸ್‌ಎಸ್‌ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಅಂಗವಾಗಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಭಾರತದ ಮೇಲೆ ಸಾವಿರಾರು ವರ್ಷಗಳಿಂದ ಆಕ್ರಮಣಗಳು ನಡೆಯುತ್ತಲೆ ಇವೆ. ದೇಶದ ಗತವೈಭವ ಮರು ಪ್ರತಿಷ್ಠಾಪಿಸುವ, ದೇಶ ರಕ್ಷಣೆಗಾಗಿ ಹುಟ್ಟಿಕೊಂಡ ಆರ್‌ಎಸ್‌ಎಸ್‌ಗೆ ಶತಮಾನೋತ್ಸವ. ನಾಗಪುರದಲ್ಲಿ ಒಂದು ಶಾಖೆಯಿಂದ ಪ್ರಾರಂಭಗೊಂಡ ಆರ್‌ಎಸ್‌ಎಸ್‌, ಇದೀಗ ದೇಶದಲ್ಲಿ 83 ಸಾವಿರ ಶಾಖೆ ಹೊಂದಿದೆ ಎಂದರು.

ಆರ್‌ಎಸ್‌ಎಸ್‌ನ ಹಾದಿ ಸುಗಮವಾಗಿರಲಿಲ್ಲ. ನಾನಾಬಗೆಯಲ್ಲಿ ಸಂಘದ ವಿರುದ್ಧ ಷಡ್ಯಂತ್ರ ನಡೆದಿವೆ. ಸಾಕಷ್ಟು ಆರೋಪ, ಪ್ರತ್ಯಾರೋಪ ಎದುರಿಸಲಾಗಿದೆ. ಸಂಘವನ್ನು ಪ್ರತಿಬಂಧಿಸುವ ಜತೆಗೆ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿ ತೊಂದರೆ ಕೊಡುವ ಕೆಲಸಗಳೂ ಆಗಿವೆ. ಆದರೂ ಇವೆಲ್ಲವುಗಳ ಮಧ್ಯೆಯೇ ಸಂಘವು ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡು ಶಕ್ತಿಯುತವಾಗಿ ಬೆಳೆದಿದೆ ಎಂದರು.

ಸ್ವಾಭಿಮಾನಿ ಹಿಂದೂ ಸಮಾಜ:

ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಿ ಸ್ವಾಭಿಮಾನಿ ಹಿಂದೂ ಸಮಾಜ. ಮಾದರಿಯ ಸ್ವಾವಲಂಬಿ ಭಾರತ ನಿರ್ಮಾಣ ಸಂಘದ ಮುಂದಿರುವ ಗುರಿ. ಇದನ್ನು ಸಾಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದರು.

ಭಾರತವಷ್ಟೇ ಅಲ್ಲ. ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಇಡೀ ವಿಶ್ವದಲ್ಲೇ ನಿರುದ್ಯೋಗ ಸಮಸ್ಯೆ ಇದೆ. ಹೀಗಾಗಿ ಈ ಬಗ್ಗೆ ಚಿತ್ತ ವಹಿಸದೇ, ತನ್ನದೇಯಾದ ಶೈಲಿಯಲ್ಲಿ ಸ್ವದೇಶಿ ಉತ್ಪನ್ನಗಳ ಬಳಕೆಯೊಂದಿಗೆ ಸ್ವಾವಲಂಬಿ ಮಾದರಿ ಭಾರತ ನಿರ್ಮಾಣದತ್ತ ಮುನ್ನಡೆಯಬೇಕಿದೆ ಎಂದರು.

ಅಮೆರಿಕ ನೀತಿ, ನಿಲುವು, ನಿರ್ಬಂಧಗಳು ಭಾರತದಲ್ಲಿ ನಡೆಯಲ್ಲ ಎಂದು ಗುಡುಗಿದ ಅವರು, ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ, ಇಸ್ರೇಲ್, ಉಕ್ರೇನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಂಘರ್ಷಗಳು ನಡೆಯುತ್ತಿವೆ. ಭಾರತದಲ್ಲಿ ಎಲ್ಲ ವರ್ಗದ ಜನಾಂಗವು ಇದ್ದರೂ, ಯಾವುದೇ ಸಂಘರ್ಷವಿಲ್ಲದೇ ಏಕತೆಯಿಂದ ಬದುಕುತ್ತಿದ್ದಾರೆ. ಆ ಮೂಲಕ ವಿಶ್ವಕ್ಕೆ ಏಕತೆ ಸಂದೇಶ ಸಾರುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಹಿಂದೂ ಸಮ್ಮೇಳನ:  ಶತಾಬ್ದಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹಿಂದೂ ಸಮ್ಮೇಳನವನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಹುಬ್ಬಳ್ಳಿಯಲ್ಲೂ ಹಿಂದೂ ಸಮ್ಮೇಳನ ನಡೆಯಲಿದೆ. ಆರ್‌ಎಸ್‌ಎಸ್‌ನ ಹೊಸ ಕಾರ್ಯಕರ್ತರು ಸಂಘದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜತೆಗೆ ನಿಮ್ಮ ನಿಮ್ಮ ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿಎ ಚನ್ನವೀರ ಮುಂಗರವಾಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಉದಯಿಸಿದ ಸಂಘವು ದೇಶದ ಉದ್ದಗಲಕ್ಕೂ ಬೆಳೆದು ನೂರು ವರ್ಷ ಪೂರೈಸಿದೆ. ರಾಷ್ಟ್ರಪ್ರೇಮ, ಹಿಂದುತ್ವದ ಏಕತೆಗೆ ಶ್ರಮಿಸುವ ಜತೆಗೆ ಸಮಾಜದ ಅಭಿವೃದ್ಧಿಗೆ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದೆ. ಆ ಮೂಲಕ ಸಮಾಜ ಸೇವೆ ಪ್ರತೀಕವನ್ನು ಸಂಘ ಸಾರುತ್ತಾ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ ಎಂದರು.

ಆರ್‌ಎಸ್‌ಎಸ್ ಭಾರತ ಮಾತೆಯನ್ನು ದುಷ್ಟಶಕ್ತಿಯಿಂದ ರಕ್ಷಿಸುತ್ತಿದೆ. ಬದ್ಧತೆ, ಸಮಯಪಾಲನೆ, ಶಿಸ್ತು ಪರಿಪಾಠದೊಂದಿಗೆ ನವ ಪೀಳಿಗೆಯಲ್ಲಿ ರಾಷ್ಟ್ರಪ್ರೇಮ ಮೂಡಿಸುತ್ತಿದೆ. ಶಿಕ್ಷಣ, ಕೈಗಾರಿಕೆ, ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಭಾರತದ ಯುವ ಜನತೆ ಉತ್ತುಂಗದಲ್ಲಿದೆ ಎಂದರು.

ಸಮಾವೇಶದಲ್ಲಿ ಸಂಘದ ಉತ್ತರ ಪ್ರಾಂತ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ಧಾರವಾಡ ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಹು-ಧಾ ಮಹಾನಗರ ಸಂಘಚಾಲಕ ಶಿವಾನಂದ ಅವಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಸ್ವರ್ಣಾ ಗ್ರೂಪ್‌ ಮಾಲೀಕರಾದ ಡಾ. ಸಿಎಚ್ ವಿಎಸ್‌ವಿ. ಪ್ರಸಾದ, ನಂದಕುಮಾರ, ಶಂಕ್ರಣ್ಣ ಮುನವಳ್ಳಿ, ಭಾಸ್ಕರ ಜಿತೂರಿ, ಕುಶಾಲ ಬೇಂದ್ರೆ, ಯಮುನಕ್ಕ ನಾಯಕ, ರಾಜಕುಮಾರ ಹುಟಗಿ, ಕೆ. ಅಶ್ವತ್ಥ, ರಮೇಶ ಕಲಾಲ, ಮರಿಯಪ್ಪ ರಾಮಯ್ಯ, ಬಸಪ್ಪ ಮಾದರ, ಅನಂತ ಪದ್ಮನಾಭ, ಶಾಂತರಾಜ ಪೋಳ ಇದ್ದರು.

Read more Articles on