ಸಾರಾಂಶ
ಭಟ್ಕಳ: ಹಿಂದೂ ಸಮಾಜ ಜಾತಿಯ ಹೆಸರಿನಲ್ಲಿ ವಿಘಟಿತರಾಗದೇ ಸಂಘಟಿತರಾಗಿ ಧರ್ಮದ ಉಳಿವಿಗಾಗಿ ಕೆಲಸ ಮಾಡಬೇಕು ಎಂದು ಚಿಂತಕ ಹಾಗೂ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಅವರು ಪಟ್ಟಣದ ಮಣ್ಕುಳಿಯ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮ ಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನಗಳು ದೊಡ್ಡದೊಡ್ಡ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿರಬಾರದು. ಬದಲಾಗಿ ಧರ್ಮ ಶ್ರದ್ಧೆ ಪ್ರಸಾರ ಮಾಡುವ ವಿದ್ಯಾಕೇಂದ್ರಗಳಾಗಿ ಬದಲಾಗಬೇಕು. ಸನಾತನ ಹಿಂದೂ ಧರ್ಮ ಎಲ್ಲಾ ಧರ್ಮಗಳಿಗಿಂತ ವಿಭಿನ್ನವಾದ ಧರ್ಮ. ಈ ಧರ್ಮದಲ್ಲಿ ಹಿಂದೂಗಳು ದೇವರನ್ನು ಯಾವ ಯಾವ ಮಾರ್ಗದಲ್ಲಿ ಕಾಣಬಹುದು ಎನ್ನುವುದನ್ನು ನಮ್ಮ ಪೂರ್ವಜರು ಯೋಗ, ಆಧ್ಯಾತ್ಮಿಕ ಚಿಂತನೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ.ಅದೇ ಮಾರ್ಗವನ್ನು ಇಂತಹ ಶ್ರದ್ಧಾ ಕೇಂದ್ರಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೂ ತೋರಿಸಿಕೊಡಬೇಕು. ಸಮಾಜದ ಯುವ ತರುಣರಲ್ಲಿ ಆಂಜನೇಯಂತೆ ಸಮಾಜವನ್ನು ಮುನ್ನಡೆಸಬಲ್ಲ ಅಗಾಧ ಶಕ್ತಿ ಇದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಯುವಕರ ಶಕ್ತಿಯನ್ನು ಬಡಿದ್ದೆಬ್ಬಿಸಿ ನವಚೈತನ್ಯ ತುಂಬಬೇಕಾದ ಅನಿವಾರ್ಯತೆ ಇದೆ ಎಂದ ಅವರು, ನಮ್ಮಲ್ಲಿ ದುರ್ಬಲತೆ ಇದ್ದರೆ ಎಲ್ಲರೂ ನಮ್ಮನ್ನು ತುಳಿಯಲು ನೋಡುತ್ತಾರೆ. ಸದೃಢರಾಗಿದ್ದರೆ ಯಾರು ನಮ್ಮ ತಂಟೆಗೆ ಬರುವುದಿಲ್ಲ. ಭಾರತ ದೇಶ ಇಂದು ಸದೃಢವಾಗಿದೆ; ಒಗಟ್ಟಾಗಿದೆ ಎಂದು ಅರಿತ ಪ್ರಪಂಚ ಉಳಿದ ದೇಶಗಳು ಯುದ್ಧದ ಸನ್ನಿವೇಶದಲ್ಲಿ ಭಾರತ ಮಾಡಿದ್ದು ಸರಿಯಾಗಿದೆ ಎಂದು ಹೇಳಿಕೆ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ, ಪುನೀತ್ ಕೆರೆಹಳ್ಳಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಪ್ರಮುಖರಾದ ಸುಬ್ಬಯ್ಯ, ಆನಂದ ಶೆಟ್ಟಿ ಮಾತನಾಡಿದರು. ಗಜಾನನ ಶೆಟ್ಟಿ, ಗುರುದತ್ತ ಶೇಟ್, ಅಣ್ಣಪ್ಪ ಮೊಗೇರ, ಗಜಾನನ ಆಚಾರ್ಯ,ರಾಘವೇಂದ್ರ ಗೊಂಡ, ವಸಂತ ಖಾರ್ವಿ ಮುಂತಾದವರು ವೇದಿಕೆಯಲ್ಲಿದ್ದರು.ಸೂರಜ್ ಶೆಟ್ಟಿ ಪ್ರಾರ್ಥಿಸಿದರು. ರಾಜೇಶ ಶೆಟ್ಟಿ ಸ್ವಾಗತಿಸಿದರು. ಆಶಾ ಕಲ್ಮನೆ, ಪೂರ್ಣಿಮಾ ಶೆಟ್ಟಿ ನಿರೂಪಿಸಿದರು.
ಭಟ್ಕಳದ ಮಣ್ಕುಳಿಯ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆಯನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಉದ್ಘಾಟಿಸಿದರು.