ಇಬ್ಬರು ಛಲ ಬಿಡದೆ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆ ಮುಂಚಿನ ಸಂಪ್ರದಾಯಗಳನ್ನು ಪೂರೈಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಬೇಕೆಂದು ಸತತ ಪ್ರಯತ್ನ ಮಾಡಿ ಯಶಸ್ವಿ

ಸೋಮರಡ್ಡಿ ಅಳವಂಡಿ ಕೊಪ್ಪಳ

ಅನ್ಯ ಜಾತಿಯವರನ್ನು ಪ್ರೀತಿಸಿದರೆ ಕದ್ದು ಮುಚ್ಚಿ ಓಡಿ ಹೋಗಿ ವಿವಾಹವಾಗುವ ಕಾಲ ಇದು. ಆದರೆ ಇಲ್ಲಿ ಹಿಂದೂ ಯುವಕ, ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ, ಕುಟುಂಬದವರನ್ನು ಒಪ್ಪಿಸಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗುವ ಮೂಲಕ ಧರ್ಮ ಮೀರಿದ ಬಾಂಧವ್ಯ ಬೆಸದು ಮಾದರಿಯಾಗಿದ್ದಾರೆ.

ಅಷ್ಟೇ ಅಲ್ಲ, ಪ್ರೀತಿಸಿದ ಯುವಕನಿಗಾಗಿ ಮುಸ್ಲಿಂ ಯುವತಿ ಧರ್ಮದ ಕಟ್ಟಳೆ ಮೀರಿ ಬಿಂದಿ ಧರಿಸಿ ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಕೊಪ್ಪಳ ಸಮೀಪದ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

ತಾಲೂಕಿನ ಅಳವಂಡಿ ಗ್ರಾಮದ ಚಂದ್ರಕಲಾ ಹಾಗೂ ಸಿದ್ದರಡ್ಡಿ ಬಿಸನಹಳ್ಳಿ ಎಂಬುವರ ಮಗ ವೆಂಕಟೇಶರಡ್ಡಿ ಹಾಗೂ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಮಮ್ತಾಜಿ ಹಾಗೂ ಬಾಷುಸಾಬ್‌ ಕಟ್ಟಿಮನಿ ಅವರ ಪುತ್ರಿ ಶಹೀನಾ ಮದುವೆ ಇಲ್ಲಿಗೆ ಸಮೀಪದ ಭಾಗ್ಯನಗರ ಬಾಲಾಜಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಎರಡು ಕುಟುಂಬದವರು ಹಾಗೂ ಎರಡು ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ವಾದ್ಯವೃಂದ, ಮಂತ್ರ ಪಠಣ ಮೂಲಕ ವಿವಾಹ ನೆರವೇರಿತು.

ಒಂಬತ್ತು ವರ್ಷದ ಪ್ರೀತಿ:

ಕಾಲೇಜು ಓದುವ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಪದವಿ ಮುಗಿದರೂ ಇವರ ಪ್ರೀತಿ ನಿರಂತರವಾಗಿರುತ್ತದೆ. ಪರಸ್ಪರ ಪ್ರೀತಿಸುತ್ತಿದ್ದರು ಬೇರೆ ಬೇರೆ ಧರ್ಮ ಎನ್ನುವುದು ಇವರ ಮದುವೆಗೆ ಅಡ್ಡಿಯಾಗುತ್ತದೆ. ಆದರೆ ಇಬ್ಬರು ಛಲ ಬಿಡದೆ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆ ಮುಂಚಿನ ಸಂಪ್ರದಾಯಗಳನ್ನು ಪೂರೈಸಿ, ಶಾಸ್ತ್ರೋಕ್ತವಾಗಿ ಮದುವೆಯಾಗಬೇಕೆಂದು ಸತತ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.

ಭಾರಿ ವಿರೋಧ ವ್ಯಕ್ತವಾದರೂ ಹಠಬಿಡದೆ ತಮ್ಮ ಮನೆಯ ಹಿರಿಯರನ್ನು ಒಪ್ಪಿಸಿ, ತಮ್ಮ ಪ್ರೀತಿ ಗೆಲ್ಲಿಸಿ, ವಿವಾಹ ಎಂಬ ಶಾಶ್ವತ ಬಂಧನಕ್ಕೆ ಎಲ್ಲ ಬಂಧು-ಬಾಂಧವರ ಎದುರು ಒಳಗಾಗಿದ್ದಾರೆ.

ಕಟ್ಟಳೆ ಮೀರಿ ಸಪ್ತಪದಿ ತುಳಿದ ವಧು:

ಶಹೀನಾ ತನ್ನ ಧರ್ಮದ ಕಟ್ಟಳೆ ಮೀರಿ ಹಿಂದೂ ಸಂಪ್ರದಾಯ ಪಾಲಿಸಿ, ಬಿಂದಿ ಇಟ್ಟುಕೊಂಡು ಸಪ್ತಪದಿ ತುಳಿದು ಮಂತ್ರ ಪಠಣಗಳೊಂದಿಗೆ ಮಾಂಗಲ್ಯ ಕಟ್ಟಿಸಿಕೊಳ್ಳುವ ಮೂಲಕ ''''ಜಾನಕಿ''''ಯಾಗಿದ್ದಾರೆ. ಒಂಬತ್ತು ವರ್ಷಗಳ ಪ್ರೀತಿ ಎನ್ನುವ ತಪಸ್ಸು ಮಾಡಿದ ಯುವಕ, ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲೇಬೇಕು ಎಂದು ಹಠತೊಟ್ಟು ಗೆದ್ದಿದ್ದಾನೆ. ಇದು ಪ್ರೀತಿಯ ಮದುವೆ, ಇಲ್ಲಿ ಜಾತಿ, ಧರ್ಮಕ್ಕೆ ಅವಕಾಶ ಇಲ್ಲ ಎಂದು ಸಾರಿ ಹೇಳಿದ್ದಾನೆ.

ಪರಸ್ಪರ ಪ್ರೀತಿಸಿದವರು ಮದುವೆಗೆ ಅವರ ಕುಟುಂಬಸ್ಥರನ್ನು ಒಪ್ಪಿಸಿ, ಕಲ್ಯಾಣ ಮಂಟಪದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದು, ನಮಗೆ ಸಂತೋಷವಾಗಿದೆ. ಯುವಕ ಹಾಗೂ ಯುವತಿ ಬೇರೆ ಬೇರೆ ಧರ್ಮದವರಾಗಿದ್ದರೂ ಪರಸ್ಪರ ಕೂಡಿ ಅದ್ಧೂರಿ ಮದುವೆ ಮಾಡಿದ್ದೇವೆ ಎಂದು ವರನ ಸಂಬಂಧಿ ಭರಮರಡ್ಡಿ ಬಿಸನಳ್ಳಿ ತಿಳಿಸಿದ್ದಾರೆ.

ಕುಟುಂಬದವರೆಲ್ಲರೂ ಸೇರಿ ಮದುವೆ ಮಾಡಿದ್ದೇವೆ. ಕದ್ದು ಮುಚ್ಚಿ ಮಾಡುವುದಕ್ಕಿಂತ ಹೀಗೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದು ಒಳ್ಳೆಯದಲ್ಲವೇ? ಎಂದು ವಧುವಿನ ಸಂಬಂಧಿ ಬಾಬುಸಾಬ್‌ ತಿಳಿಸಿದ್ದಾರೆ.