ಮಂಗಳೂರು: ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ವೇಳೆ ಸಂಸದ ಪಪ್ಪು ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸನಾತನ ಧರ್ಮ ಮತ್ತು ಅಯೋಧ್ಯೆಯ ರಾಮಮಂದಿರ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ. ಮಂಗಳೂರು ಇದರ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಕೇರಳ ಹಿಂದು ಐಕ್ಯ ವೇದಿಕೆ ಮುಖಂಡ ಕುಂಟಾರು ರವೀಶ್ ತಂತ್ರಿ ಮಾತನಾಡಿ, ದೇಶದಲ್ಲಿ ಧರ್ಮ ಜಾಗೃತಿಯಾಗುವುದನ್ನು ಸಹಿಸಲು ಸಾಧ್ಯವಾಗದೆ ಕೆಲವರು ಸಣ್ಣಪುಟ್ಟ ಕಾರಣಗಳನ್ನು ಹಿಡಿದುಕೊಂಡು ಧರ್ಮನಿಂದನೆ ಮಾಡುತ್ತಿದ್ದಾರೆ. ಪಪ್ಪು ಯಾದವ್ ಸಂಸದನಾಗಲು ಯೋಗ್ಯವಲ್ಲದ ವ್ಯಕ್ತಿ. ಯಾರನ್ನೋ ಮೆಚ್ಚಿಸಲು ಹಿಂದು ಧರ್ಮವನ್ನು ನಿರಂತರವಾಗಿ ನಿಂದನೆ ಮಾಡುತ್ತಿದ್ದಾರೆ ಎಂದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಪಾಧ್ಯಕ್ಷೆ ಕಾತ್ಯಾಯಿನಿ ರಾವ್ ಮಾತನಾಡಿ, ಸನಾತನ ಧರ್ಮ, ಸಾಧು ಸಂತರನ್ನು ಅವಮಾನವಾಗುತ್ತಿರುವುದರ ವಿರುದ್ಧ ಎಲ್ಲ ಹಿಂದೂಗಳು ಒಂದಾಗಿ ಪ್ರತಿಭಟನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್, ಜಿಲ್ಲಾ ಕಾರ್ಯದರ್ಶಿ ಆನಂದ್ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ರಾಜಗೋಪಾಲ ರೈ, ವಿಹಿಂಪ ಮುಖಂಡ ಗೋಪಾಲ ಕುತ್ತಾರ್, ವಿಕ್ರಂ ಗುರುಸ್ವಾಮಿ, ಮಂಜುನಾಥ್ ಗುರುಸ್ವಾಮಿ ಮತ್ತಿತರರಿದ್ದರು.

ಪ್ರತಿಭಟನಾಕಾರರು ಪಪ್ಪು ಯಾದವ್ ಮತ್ತು ರಾಹುಲ್ ಗಾಂಧಿಯ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.