ಎಲ್ಲರಲ್ಲೂ ದೇವರನ್ನು ಕಾಣುವ ಧರ್ಮ ಹಿಂದೂ ಧರ್ಮ. ಹಿಂದೂ ಸಮಾಜ ಒಂದಾಗಬೇಕು.
ಸಂಡೂರು: ಎಲ್ಲರಲ್ಲೂ ದೇವರನ್ನು ಕಾಣುವ ಧರ್ಮ ಹಿಂದೂ ಧರ್ಮ. ಹಿಂದೂ ಸಮಾಜ ಒಂದಾಗಬೇಕು. ಜಾಗೃತವಾಗಬೇಕು; ಸದೃಢವಾಗಬೇಕು ಎಂದು ವಿಶ್ವಹಿಂದೂ ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಗೋವರ್ಧನ್ ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಯಶವಂತ ವಿಹಾರ ಕ್ಲಬ್ ಮೈದಾನದಲ್ಲಿ ಶನಿವಾರ ಹಿಂದೂ ಸಮ್ಮೇಳನ ಸಮಿತಿಯಿಂದ ಹಮ್ಮಿಕೊಂಡಿದ್ದ ಸಂಡೂರು ಹೋಬಳಿ ಮಟ್ಟದ ಹಿಂದೂ ಸಮ್ಮೇಳನದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸ್ಥಾಪನೆಯಾಗಿ ೧೦೦ ವರ್ಷಗಳಾಗಿವೆ. ಆರ್‌ಎಸ್‌ಎಸ್ ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಸಮಾಜದ ರಕ್ಷಣೆಗಾಗಿ ಶ್ರಮಿಸುತ್ತಿದೆ. ಈ ಸಂಘಟನೆ ಜನತೆಯಲ್ಲಿ ದಾಸ್ಯದ ಮನೋಭಾವನೆಯನ್ನು ಹೋಗಲಾಡಿಸಿ, ದೇಶಪ್ರೇಮ, ಸ್ವಾಭಿಮಾನ ಹಾಗೂ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ. ಹಿಂದೂ ಧರ್ಮ ಅನ್ಯ ದೇಶಗಳ ಮೇಲೆ ಆಕ್ರಮಣ ಮಾಡಿಲ್ಲ. ಇದರಲ್ಲಿನ ಉತ್ತಮ ಅಂಶಗಳನ್ನು ಇಂದು ಇತರರು ಅನುಸರಿಸತೊಡಗಿದ್ದಾರೆ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಮೇಲೆ ಆಕ್ರಮಣ ನಡೆಯುತ್ತಿದ್ದರೂ, ಹಿಂದೂ ಧರ್ಮವನ್ನು ನಾಶ ಮಾಡಲಾಗಿಲ್ಲ. ಪಾಲಕರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕಿದೆ ಎಂದರು.
ಹಿಂದೂ ಸಮಾಜದಲ್ಲಿ ಐಕ್ಯತೆ, ಸಾಮರಸ್ಯ ಉಂಟು ಮಾಡಲು, ಸ್ವದೇಶಿ ವಸ್ತುಗಳನ್ನು ಬಳಸಲು, ಪರಿಸರವನ್ನು ಸಂರಕ್ಷಿಸಲು ಹಾಗೂ ಜನರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶದೊಂದಿಗೆ ಇಂತಹ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಿಂದೂ ಧರ್ಮ ಉಳಿದರೆ ದೇಶ ಉಳಿಯುತ್ತದೆ. ಹಿಂದೂ ಧರ್ಮ ಹಾಗೂ ಸಮಾಜದ ಏಳ್ಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.ಸುಶೀಲಾನಗರದ ಬಂಜಾರ ಪೀಠದ ತಿಪ್ಪೇಸ್ವಾಮಿ ಮಹಾರಾಜ ಸ್ವಾಮೀಜಿ ಮಾತನಾಡಿ, ನಾವೆಲ್ಲ ಹಿಂದೂ, ನಾವೆಲ್ಲ ಒಂದೂ ಎಂಬ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಗೋ ರಕ್ಷಣೆಯಾಗಬೇಕು. ಯುವ ಜನತೆ ದುಶ್ಚಟಗಳಿಂದ ದೂರವಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್ ಶಾರದಾ ಪೀಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಗೋಪೂಜೆ ನೆರವೇರಿಸಿ ಭಾರತ ಮಾತೆಯ ಭಾವಚಿತ್ರದ ಶೋಭಾಯಾತ್ರೆಗೆ ಚಾಲನೆಯನ್ನು ನೀಡಿ, ಸನಾತನ ಹಿಂದೂ ಧರ್ಮ ಆದಿ, ಅಂತ್ಯವಿಲ್ಲದ್ದು. ರಾಮಾಯಣ, ಮಹಾಭಾರತ, ವೇದಗಳು ಜ್ಞಾನದ ನಿಧಿಗಳು. ಹಿಂದೂ ಧರ್ಮ ಒಂದು ಬದುಕುವ ಕಲೆ. ಹಂಬಲ, ಬೆಂಬಲ ಹಾಗೂ ಭಕ್ತಿ ಇದ್ದರೆ ದೇವರನ್ನು ಆಂತರ್ಯದಲ್ಲಿ ಕಾಣಲು ಸಾಧ್ಯ. ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ದೇಶದ ಜನತೆ ಐಕ್ಯತೆಯಿಂದ ದೇಶವನ್ನು ಸದೃಢಗೊಳಿಸಲು ಶ್ರಮಿಸಬೇಕಿದೆ ಎಂದರು.ಪಟ್ಟಣದ ಅಪೂರ್ವ ನೃತ್ಯಾಲಯ ತಂಡದವರು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿ, ದೇಶಭಕ್ತಿಯನ್ನು ಜಾಗೃತಗೊಳಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಭಾರತ ಮಾತೆಯ ಭಾವಚಿತ್ರದ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೀರೇಶ್ ಸ್ವಾಗತಿಸಿದರು. ಔದುಂಬರ ಭಟ್ ಕಾರ್ಯಕ್ರಮ ನಿರೂಪಿಸಿದರೆ, ಸೋಮಶೇಖರ್ ಹಿರೇಮಠ್ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಂಗಾರು ಹನುಮಂತು, ಬಿ. ಆಶೋಕ್‌ಕುಮಾರ್, ಆರ್.ಟಿ. ರಘುನಾಥ್, ಕೆ.ಯರಿಸ್ವಾಮಿ, ಜೆ.ಎಂ. ಪರಮೇಶ್ವರ್, ಮೂಲಿಮನೆ ಮಲ್ಲಣ್ಣ, ತಿಪ್ಪೇಸ್ವಾಮಿ, ರಾಮರಾವ್, ವಾದಿರಾಜ್, ನರೇಂದ್ರಪಾಟೀಲ್, ವಸಂತಕುಮಾರ್, ವೆಂಕಟಸುಬ್ಬಯ್ಯ, ವಿಶ್ವನಾಥರೆಡ್ಡಿ, ದರೋಜಿ ರಮೇಶ್, ವಾಮಣ್ಣ, ಶಂಕರ್‌ರಾವ್ ಪೋಳ್ ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.