ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಎಲ್ಲ ದೇಶಗಳಲ್ಲಿ ಅಶಾಂತಿ ಇದ್ದರೆ ನಮ್ಮ ದೇಶದಲ್ಲಿ ಮಾತ್ರ ಶಾಂತಿ ನೆಲೆಸಿದೆ. ಎಲ್ಲರನ್ನು ಭಾವೈಕ್ಯತೆಯಿಂದ ನಡೆಸಿಕೊಳ್ಳುವ ಧರ್ಮ ಯಾವುದಾದರೂ ಇದ್ದರೆ ಅದು ಹಿಂದು ಧರ್ಮ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ತಿಳಿಸಿದರು.ಸ್ಥಳೀಯ ಆಶಾಪುರ ರಸ್ತೆಯಲ್ಲಿನ ಎಸ್‌ಆರ್‌ಕೆ ಕಲ್ಯಾಣ ಮಂಟಪದಲ್ಲಿ ಪ್ರಬೋಧಾಶ್ರಮದ ಪ್ರಬೋಧ ಸೇವಾ ಸಮಿತಿ ಹಾಗೂ ಹಿಂದೂ ಜ್ಞಾನ ವೇದಿಕೆ ರವಿವಾರ ಹಮ್ಮಿಕೊಂಡಿರುವ ತ್ರೈತ ಸಿದ್ಧಾಂತ ಜ್ಞಾನ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಹಳ್ಳಿಗೆ ಹೋಗಿ ಭಗವದ್ಗೀತೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂದು ನಮ್ಮ ಮಕ್ಕಳಿಗೆ ಯಾವುದು ಧರ್ಮ, ನಮ್ಮ ಆಚಾರ ವಿಚಾರಗಳೇನು ಎಂಬುದೇ ಗೊತ್ತಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಧರ್ಮದ ಬಗ್ಗೆ, ಭಗವದ್ಗೀತೆಯ ಸಾರ ಸಾರುತ್ತಿರುವುದು ಉತ್ತಮ ಕಾರ್ಯ ಎಂದರು.
ಭಗವದ್ಗೀತೆಯ ಸಾರವನ್ನು ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಸುಂದರವಾಗಿರುತ್ತದೆ. ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು, ಕೋಪದಲ್ಲಿ ಹೇಗಿರಬೇಕು, ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸುತ್ತದೆ. ಭಗವದ್ಗೀತೆಯಲ್ಲಿ ಸುಳ್ಳಿಲ್ಲ ಎಂದು ಹಿರಿಯರು ತಿಳಿಸಿದ್ದಾರೆ. ಮುಂದಿನ ಪೀಳಿಗೆಗೆ ಇಂಥ ಗ್ರಂಥಗಳ ಬಗ್ಗೆ ತಿಳಿಸಬೇಕು ಎಂದರು.ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ ಮಾತನಾಡಿ, ಭಗವದ್ಗೀತೆಗೆ ಬಹಳ ದೊಡ್ಡ ಶಕ್ತಿ ಇದೆ. ನಮ್ಮ ದೇಶದ ಪ್ರಧಾನಿಗಳು ಯಾವುದೇ ದೇಶಕ್ಕೆ ಹೋದರೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಪಾಲಿಸುತ್ತಾರೆ. ಭಗವದ್ಗೀತೆ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ. ಇಂದು ನೀವು ಕೂಡ ಮನೆ ಮನೆಗೆ ಭಗವದ್ಗೀತೆ ತಲುಪಿಸುತ್ತಿರುವುದು ಧರ್ಮ ಕ್ರಾಂತಿ ಇದ್ದಂತೆ ಎಂದರು.
ಸಮಿತಿ ಪ್ರತಿನಿಧಿ ಶಿವರಾಜ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರ ತ್ರೈತ ಸಿದ್ಧಾಂತ ಭಗವದ್ಗೀತೆ ಹಾಗೂ ಅದರ ಅನುಬಂಧ ಗ್ರಂಥಗಳ ಜ್ಞಾನ ಪ್ರಚಾರ ಕಾರ್ಯಕ್ರಮವು ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಜ.16ರವರೆಗೂ ನಡೆಯಲಿದೆ. ಇದರಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ 250 ಪ್ರಬೋಧಾಶ್ರಮ-ಶ್ರೀ ಕೃಷ್ಣ ಮಂದಿರದ ಭಕ್ತರು ಪಾಲ್ಗೊಂಡಿದ್ದಾರೆ. ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ನೂರಕ್ಕಿಂತಲೂ ಅಧಿಕ ತ್ರೈತ ಸಿದ್ಧಾಂತ ಗ್ರಂಥಗಳನ್ನು ರಚಿಸಿದ್ದಾರೆ. ಈ ಗ್ರಂಥಗಳು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಎಂಥಹ ಪ್ರಶ್ನೆಗಾದರೂ ಶಾಸ್ತ್ರ ಬದ್ಧವಾಗಿ ಉತ್ತರವನ್ನು ನೀಡುವಂತಹ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್, ಕಡಗೋಳು ಆಂಜನೇಯ ಸೇರಿದಂತೆ ವಿವಿಧ ಮುಖಂಡರು, ನೂರಾರು ಭಕ್ತರು ಪಾಲ್ಗೊಂಡಿದ್ದರು.