ಕೆಚ್ಚಲು ಕೊಯ್ಯೋರ ವಿರುದ್ಧ ಹಿಂದೂಗಳು ಹೋರಾಡಬೇಕು

| Published : Jan 20 2025, 01:33 AM IST

ಸಾರಾಂಶ

ಭಾರತ ಹಿಂದೂ ಸನಾತನ ಸಂಸ್ಕೃತಿಯ ತವರೂರಾಗಿದೆ. ಈ ದೇಶದಲ್ಲಿ ಗೋ ಮಾತೆಗೆ ಪೂಜ್ಯನೀಯ ಸ್ಥಾನಮಾನಗಳಿವೆ. ಅಂತಹ ಗೋಮಾತೆಯ ಕೆಚ್ಚಲನ್ನೇ ಕತ್ತರಿಸುವಂತಹ ವಿಕೃತ ಮನಸ್ಥಿತಿಗಳ ವಿರುದ್ದ ಹಿಂದೂ ಸಮಾಜ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ. ರಾಘವೇಂದ್ರ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಸಂಗಮನಾಥ ಶ್ರೀ, ಚನ್ನಬಸವ ಶ್ರೀ ಸ್ಮರಣೋತ್ಸವದಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಭಾರತ ಹಿಂದೂ ಸನಾತನ ಸಂಸ್ಕೃತಿಯ ತವರೂರಾಗಿದೆ. ಈ ದೇಶದಲ್ಲಿ ಗೋ ಮಾತೆಗೆ ಪೂಜ್ಯನೀಯ ಸ್ಥಾನಮಾನಗಳಿವೆ. ಅಂತಹ ಗೋಮಾತೆಯ ಕೆಚ್ಚಲನ್ನೇ ಕತ್ತರಿಸುವಂತಹ ವಿಕೃತ ಮನಸ್ಥಿತಿಗಳ ವಿರುದ್ದ ಹಿಂದೂ ಸಮಾಜ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವತತ್ವದ ಮಹಾ ಬೆಳಗಿನಲ್ಲಿ ಬೆಳಗಿದ ಲಿಂಗೈಕ್ಯ ಶ್ರೀ ಸಂಗಮನಾಥ ಮಹಾಸ್ವಾಮೀಜಿ ಅವರ 63ನೇ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶ್ರೀ ಚನ್ನಬಸವ ಮಹಾಸ್ವಾಮೀಜಿ ಅವರ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸನಾತನ ಹಿಂದೂ ಸಂಸ್ಕೃತಿಯ ಮೇಲೆ ದಿನೇದಿನೇ ದಬ್ಬಾಳಿಕೆಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದರೆ ತಾಯಂದಿರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿಸಬೇಕಾಗಿದೆ ಎಂದರು.

ಚನ್ನಗಿರಿ ತಾಲೂಕಿನಲ್ಲಿ ಅಡಕೆ ಬೆಳೆಗಾರ ರೈತರು ಹೆಚ್ಚಾಗಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ನಡೆದ ಅಡಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವಾಣ್ ಬಂದಿದ್ದರು. ಆಗ 2 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಕ್ಯಾನ್ಸರ್‌ಕಾರಕ ಎಂದು ಹೇಳಿದೆ. ಆದರೆ, ಸಾಂಪ್ರದಾಯಕವಾಗಿ ಬಂದಿರುವ ಎಲೆ-ಅಡಕೆಯನ್ನು ಕ್ಯಾನ್ಸರ್‌ಗೆ ಹೋಲಿಸುವುದು ಸರಿಯಲ್ಲ. ಈ ಬಗ್ಗೆ ತಜ್ಞರ ತಂಡದಿಂದ ಸಂಶೋಧನೆ ನಡೆಸಿ, ಅಂತರ ರಾಷ್ಟ್ರೀಯ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತಹ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

ವಿದೇಶದಿಂದ ಬರುತ್ತಿರುವ ಅಡಕೆಗೆ ಕಡಿವಾಣ ಹಾಕಿ ಭಾರತದಲ್ಲಿ ಬೆಳೆಯುವ ಅಡಕೆಯನ್ನು ಹೆಚ್ಚು ರಪ್ತು ಮಾಡುವಂತೆ ಮತ್ತು ಕಳ್ಳ ಸಾಗಾಣಿಕೆಯಿಂದ ಬರುತ್ತಿರುವ ಅಡಕೆಗೆ ಸಂಪೂರ್ಣ ಕಡಿವಾಣ ಹಾಕಬೇಕು. ರೈತರು ಕೊಡುವ ಅಡಕೆಯಲ್ಲಿ ಶೇ.7ರಷ್ಟು ತೇವಾಂಶ ಇರಬೇಕಾಗಿದೆ. ಅಡಕೆಯಲ್ಲಿ ಶೇ.12ರಷ್ಟು ತೇವಾಂಶ ಇದ್ದರೂ ಮಾರುಕಟ್ಟೆಯಲ್ಲಿ ಖರೀದಿಸಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದರು.

ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಸರ್ವರೂ ಸಮಾನರು ಎಂದು ನಾಡಿಗೆ ಬೋಧನೆ ಮಾಡಿದವರು 12ನೇ ಶತಮಾನದ ಶರಣರಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಬಸತತ್ವ ಎಂಬುದು ಬಾಯಿ ಮಾತಿಗೆ ಇದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆ ಕಡಿಮೆ ಆಗಿರುವುದು ವಿಷಾದಕರ ಸಂಗತಿ ಎಂದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ದೇಶದ ಸಂಸ್ಕೃತಿ ಉಳಿದಿರುವುದು ಮಠ-ಮಂದಿರಳಿಂದ. ಗುರು ಪರಂಪರೆ ಇಲ್ಲದೇ ಇದಿದ್ದರೆ ಭಾರತ ಯಾವ ದಿಕ್ಕಿನೆಡೆಗೆ ಸಾಗುತ್ತಿತ್ತು ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಅಸಾಧ್ಯವಾಗುತ್ತಿತ್ತು ಎಂದರು.

ವಿಧಾನ ಪರಿಷತ್ತು ಸದಸ್ಯ ಸಿ.ಪುಟ್ಟಣ್ಣ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು. ಸಾಣೇಹಳ್ಳಿ ಶ್ರೀಗಳು ಮತ್ತು ಪಾಂಡೋಮಟ್ಟಿ ಶ್ರೀಗಳು ಮುಂದಿನ ವಾರದಿಂದ ಸಾಣೆಹಳ್ಳಿಯಿಂದ ಸಂತೆಬೆನ್ನೂರುವರೆಗೆ ಸಾವಯವ ಕೃಷಿ, ಪರಿಸರ ಕಾಳಜಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಕೈಗೊಳ್ಳುತ್ತಿದ್ದು, ಈ ಪಾದಯಾತ್ರೆಗೆ ಶ್ರೀಗಳವರಿಗೆ ಬೆಂಬಲವಾಗಿ ಭಕ್ತವೃಂದ ಆಗಮಿಸಬೇಕು ಎಂದರು.

ಅಧ್ಯಕ್ಷತೆಯನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಿದ್ದರು. ಸಾನ್ನಿಧ್ಯವನ್ನು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಇಮ್ಮಡಿ ಮಹಾಂತೇಶ ಸ್ವಾಮಿಗಳು, ಬಸವಯೋಗಿ ಸ್ವಾಮಿಗಳು ವಹಿಸಿದ್ದರು. ಅನುಭಾವ ವಾಣಿಯನ್ನು ಬಸವತತ್ವ ಚಿಂತಕಿ ಡಿ.ಶಬ್ರಿನಾ ಮಹಮ್ಮದ್ ಆಲಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಷಡಾಕ್ಷರಿ, ಡಿ.ಎಸ್.ಪ್ರವೀಣ್, ಮಾಡಾಳು ಮಲ್ಲಿಕಾರ್ಜುನ್, ಕಾಕನೂರು ಎಂ.ಬಿ.ನಾಗರಾಜ್, ಭಕ್ತರು ಹಾಜರಿದ್ದರು.

- - - -19ಕೆಸಿಎನ್‌ಜಿ1.ಜೆಪಿಜಿ:

-19ಕೆಸಿಎನ್‌ಜಿ2.ಜೆಪಿಜಿ: