ಸಕಲೇಶಪುರ: ರಾಜ್ಯದಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯೇ ಕಾರಣ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನಾನು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದೇನೆ ಎಂದು ಇಲ್ಲಿನ ಪೊಲೀಸರು ಸ್ವಯಂಪ್ರೇರಿತರಾಗಿ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಗಲಭೆಯಾಗದಿದ್ದರೂ, ಯಾವುದೇ ಅಹಿತಕರ ಘಟನೆ ಸಂಭವಿಸದಿದ್ದರೂ ಪೊಲೀಸರು ಮೂರ್ಖತನದಿಂದ ಈ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕೇ ಕಾರಣ ಎಂದು ದೂರಿದರು.ಮುಂದುವರಿದು ಮಾತನಾಡಿದ ಅವರು, ನಾನು ಯಾವುದೇ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿಲ್ಲ. ಹಿಂದೂ ಹುಡುಗಿಯರ ರಕ್ಷಣೆ ಕುರಿತು ಮಾತನಾಡಿದರೆ ಅದು ಪ್ರಚೋದನೆಯೇ? ಗೋಹತ್ಯೆ ತಡೆಯಬೇಕು ಎಂದರೆ ಅದು ಪ್ರಚೋದನೆಯೇ? ಮತಾಂತರ ತಡೆದು ಹಿಂದೂಗಳನ್ನು ಉಳಿಸಬೇಕು ಎನ್ನುವುದು ಪ್ರಚೋದನಕಾರಿಯಾಗುತ್ತದೆಯೇ? ಅಥವಾ ಅಕ್ರಮ ಬಾಂಗ್ಲಾದೇಶಿಯರನ್ನು ಓಡಿಸಿ ಎನ್ನುವುದು ಪ್ರಚೋದನೆಯೇ? ಪೊಲೀಸರು ಮಾಡಬೇಕಾದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪೊಲೀಸರೂ ಸಹ ಇದೇ ದೇಶದಲ್ಲಿ ಬದುಕಬೇಕಾಗಿದೆ. ನಾವು ಯಾರೋ ಯಡಿಯೂರಪ್ಪನೋ ಅಥವಾ ಸಿದ್ದರಾಮಯ್ಯನೋ ಅವರ ಮಾತು ಕೇಳಿಕೊಂಡು ಬದುಕುವ ಹಾಗಿಲ್ಲ. ಕಾನೂನು ಏನು ಹೇಳುತ್ತದೋ ಅದರ ಪ್ರಕಾರ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡಲಿ. ಕಾಂಗ್ರೆಸ್‌ಗೆ ದೇಶ, ಧರ್ಮದ ಬಗ್ಗೆ ಕಾಳಜಿಯಿಲ್ಲ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್‌, ತಾಲೂಕು ಅಧ್ಯಕ್ಷ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.