ನರಸಿಂಹರಾಜಪುರಪ್ರತಿ ಹಿಂದೂಗಳು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಹಿಂದೂ ಸಮಾಜಕ್ಕಾಗಿ ಯುವ ಜನರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕೊಪ್ಪ ತಾಲೂಕು ಮಲೆನಾಡು ಗಿಡ್ಡ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ಕರೆ ನೀಡಿದರು.
ಕುದುರೆಗುಂಡಿಯಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕಪಿಲೇಶ್ವರ ಸನ್ನಿಧಿವರೆಗೆ ದೀಪೋತ್ಸವ
- ಕುದುರೆಗುಂಡಿಯಲ್ಲಿ ಸತತವಾಗಿ 17 ವರ್ಷದಿಂದ ದೀಪೋತ್ಸವ- ಈ ವರ್ಷಕ್ಕೆ ಆರ್ .ಎಸ್.ಎಸ್. ಸ್ಥಾಪನೆಗೊಂಡು 100 ವರ್ಷ
- ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಹಿಂದೂ ಸಮಾಜೋತ್ಸವಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಪ್ರತಿ ಹಿಂದೂಗಳು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಹಿಂದೂ ಸಮಾಜಕ್ಕಾಗಿ ಯುವ ಜನರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕೊಪ್ಪ ತಾಲೂಕು ಮಲೆನಾಡು ಗಿಡ್ಡ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ಕರೆ ನೀಡಿದರು.ಬುಧವಾರ ಸಂಜೆ ಕುದುರೆಗುಂಡಿಯಲ್ಲಿ ದತ್ತ ಜಯಂತಿ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕುದುರೆಗುಂಡಿ ಘಟಕ ಹಮ್ಮಿಕೊಂಡಿದ್ದ ಕುದುರೆಗುಂಡಿಯಿಂದ ಕಪಿಲೇಶ್ವರ ಸನ್ನಿಧಿವರೆಗೆ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವರ್ಷಕ್ಕೆ ಆರ್ .ಎಸ್.ಎಸ್. ಸ್ಥಾಪನೆಗೊಂಡು 100 ವರ್ಷ ತುಂಬಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಹಿಂದೂ ಸಮಾಜೋತ್ಸವ ನಡೆಯಲಿದೆ. ಕುದುರೆಗುಂಡಿಯಲ್ಲಿ ಸತತವಾಗಿ 17 ವರ್ಷದಿಂದ ದೀಪೋತ್ಸವ ನಡೆಸಿಕೊಂಡು ಬರುತ್ತಿರುವುದು ವಿಶೇಷ ಎಂದರು.
ಸೀತೂರು ಗ್ರಾಪಂ ಸದಸ್ಯ ಉಪೇಂದ್ರ ಮಾತನಾಡಿ, ಪ್ರಸ್ತುತ ಧರ್ಮ, ಧರ್ಮದ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಅಸ್ಮಿತೆ ಉಳಿಸಿಕೊಳ್ಳಬೇಕಾಗಿದೆ. ಸಂಘಟನೆಯಿಂದ ಮಾತ್ರ ನಮ್ಮ ಹಿಂದೂ ಸಮಾಜ ಬಲ ಗೊಳ್ಳಲಿದೆ ಎಂದರು.ಸಂಘ ಪರಿವಾರದ ಮುಖಂಡ ವಾಸಪ್ಪ ಕುಂಚೂರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಹಿಂದೂಗಳು ಯಾವುದಾದರೂ ಕಾರ್ಯಕ್ರಮ ಮಾಡಲು ಸರ್ಕಾರದ ಒಪ್ಪಿಗೆಕೇಳಬೇಕಾದ ಪರಿಸ್ಥಿತಿ ಬಂದಿದೆ . ಹಿಂದೂಗಳು ಒಗ್ಗಟ್ಟಾಗದಿದ್ದರೆ ಹಿಂದೂ ಸಮಾಜದ ಅವನತಿ ಕಾಣಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಕಣಿವೆ ವಿನಯ ಮಾತನಾಡಿ, ಹಿಂದೂಗಳು ಯಾವುದೇ ಪಕ್ಷದಲ್ಲಿದ್ದರೂ ನಾವು ಹಿಂದೂ ಎನ್ನಲು ಅಂಜಿಕೆ ಬೇಡ. ಯಾವ ಧರ್ಮ ಹಿಂಸೆ ಮಾಡಿ ಎಂದು ಹೇಳುವುದಿಲ್ಲ. ಪ್ರತಿಯೊಬ್ಬರೂ ನಮ್ಮ ಸಂವಿಧಾನ ಗೌರವಿಸಬೇಕು ಎಂದರು.ಕೊಪ್ಪ ತಾಲೂಕು ಬಜರಂಗದಳದ ಸಂಚಾಲಕ ವಿನಯ ಶಿವಪುರ ಮಾತನಾಡಿ, ಕಳೆದ 2 ದಶಕಗಳ ಹೋರಾಟದ ಫಲವಾಗಿ ದತ್ತ ಪೀಠದಲ್ಲಿ ಈಗ ತ್ರಿಕಾಲ ಪೂಜೆ ನಡೆಯುತ್ತಿದೆ. ದತ್ತ ಪೀಠದ ಹೋರಾಟದಲ್ಲಿ ಎಲ್ಲಾ ಹಿಂದೂಗಳು ಕೈ ಜೋಡಿಸಬೇಕು. ಯಾರೂ ಜಾತಿ ರಾಜಕಾರಣ ಮಾಡದೆ ಎಲ್ಲರೂ ಹಿಂದೂ ಎಂದು ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು. ಸಭೆಯಲ್ಲಿ ಮುಖಂಡರಾದ ಕುದುರೆಗುಂಡಿ ಅಶೋಕ ನಾಯಕ್, ನಾಗೇಶ ನಾಯಕ್ ಇದ್ದರು. ಇದೇ ಸಂದರ್ಭದಲ್ಲಿ ಅತಿಥಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪ್ರಕಾಶ ಭಟ್ ವೇದ ಘೋಷ ವಾಚಿಸಿದರು. ನಾಗಶ್ರೀ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸಾಲೇಸಿಮಕ್ಕಿ ಚೇತನ್ ವಂದಿಸಿದರು.
ನಂತರ ಕುದುರೆಗುಂಡಿಯಿಂದ ಕಪಿಲೇಶ್ವರ ಸನ್ನಿಧಿವರೆಗೆ ದೀಪೋತ್ಸವ ನಡೆಯಿತು. ಮೆರವಣಿಗೆಯಲ್ಲಿ ದತ್ತತ್ರೇಯ ಸ್ವಾಮಿ ವಿಗ್ರಹ ಹೊತ್ತ ವಾಹನ, ಬ್ರಹ್ಮಾವರದ ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ಮಂಡಳಿಯವರಿಂದ ಆಕರ್ಷಕ ನೃತ್ಯ ನಡೆಯಿತು.