ಆರ್‌ಎಸ್‌ಎಸ್, ಹಿಂದುತ್ವ, ಮನಸ್ಮೃತಿ, ಸನಾತನ ಧರ್ಮ ಇದೆಲ್ಲವೂ ಒಂದು ದೊಡ್ಡ ಜಾಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಇತ್ತು, ಈಗಲೂ ಜೀವಂತ ಇದೆ. ಆರ್‌ಎಸ್‌ಎಸ್ ಪರ ಕನ್ಹೇರಿ ಶ್ರೀ ವರ್ತನೆ ನೋಡಿದರೆ ದೇಶದಲ್ಲಿ ದೊಡ್ಡ ಜಾಲವಿದೆ ಎಂದು ತಿಳಿಯುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆರ್‌ಎಸ್‌ಎಸ್, ಹಿಂದುತ್ವ, ಮನಸ್ಮೃತಿ, ಸನಾತನ ಧರ್ಮ ಇದೆಲ್ಲವೂ ಒಂದು ದೊಡ್ಡ ಜಾಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಇತ್ತು, ಈಗಲೂ ಜೀವಂತ ಇದೆ. ಆರ್‌ಎಸ್‌ಎಸ್ ಪರ ಕನ್ಹೇರಿ ಶ್ರೀ ವರ್ತನೆ ನೋಡಿದರೆ ದೇಶದಲ್ಲಿ ದೊಡ್ಡ ಜಾಲವಿದೆ ಎಂದು ತಿಳಿಯುತ್ತದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ತಾಲಿಬಾನಿಗಳು ಎಂದು ಹೇಳಿರುವ ಕನ್ಹೇರಿ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿ, ಇವರದ್ದು ಯಾವ ತತ್ವ? ನಾವು ತತ್ವದ ಮೇಲೆ ನಡೆಯುವಂತವರು. ನಾನು ಬಸವ ತತ್ವದ ಮೇಲೆ ನಡೆಯುತ್ತೇನೆ. ಬಸವ ತತ್ವ ಏನು ಹೇಳುತ್ತದೆ. ಅದನ್ನ ಫಾಲೋ ಮಾಡಬೇಕಲ್ವಾ? 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಏನು ಹೇಳಿದ್ದಾರೆ. ಅದು ಸತ್ಯವೇ ಇದೆ, ಅದನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಇವರು. ಗುಲಾಮಗಿರಿ ಬೇಡ ಎಲ್ಲರನ್ನೂ ಸಮಾನವಾಗಿ, ಮಾನವೀಯತೆಯಿಂದ ಕಾಣಿ ಎಂದವರು ಬಸವಣ್ಣನವರು.ಮೂಢನಂಬಿಕೆ ಶಾಶ್ವತವಾಗಿ ಈ ದೇಶದಲ್ಲಿ ಇರಬೇಕು. ಗುಲಾಮಗಿರಿ ಮಾಡಿ, ಸೇವೆ ಮಾಡಿ ಕಾಲಿಗೆ ಬೀಳಿ. ಪಾದ ತೊಳೀರಿ, ನೀರು ಕುಡಿಯಿರಿ ಎಂದು ಇವರು ಹೇಳ್ತಾರೆ. ಪಾದ ತೊಳೆದ ನೀರು ಕುಡಿದರೆ ಉದ್ಧಾರ ಆಗುತ್ತಾರಾ. ಇವರ ಪಾದ ತೊಳೆದು ನೀರು ಕುಡಿಬೇಕಾ? ನಿಮ್ಮ ಪಾದ ತೊಳೆದು ಕುಡಿಯಲು ನೀವೇನು ದೇವರಾ ?. ನಾಲಿಗೆ ಇದೆ ಎಂದು ಏನಾದರೂ ಮಾತನಾಡುವುದಲ್ಲ. ಖಾವಿ ಬಿಚ್ಚಿ ಯಾವುದಾದರೂ ಬೇರೆ ಅರವಿ ಹಾಕಲು ಹೇಳಿ ಇವರಿಗೆ.
ಬೇರೆ ರಾಷ್ಟ್ರ ಮಾಡ್ಕೊಂಡು ಹೋಗಿ: ಬಾಯಿ ಇದೆ ಎಂದು ಏನೇನೊ ಮಾತನಾಡಿದರೆ ಯಾರು ಕೇಳುತ್ತಾರೆ. ಒಂದು ದಿನ ಬಡಿಸಿಕೊಳ್ಳುತ್ತಾರೆ. ಯಾವುದಾದರೂ ಧರ್ಮದ ಬಗ್ಗೆ, ಯಾರಾದರ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡುತ್ತಾರಾ? ಹಾಗಾದರೆ ನೀವು ಕಾಲಿಗೆ ಏಕೆ ಬೀಳಿಸಿಕೊಳ್ಳುತ್ತೀರಿ. ತಪ್ಪಲ್ವಾ ಇದು, ನೀ ಏನು ದೇವರಾ? ಜನರ ಹಾದಿ ತಪ್ಪಿಸುತ್ತಿರುವವನು ನೀನು. ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವವ ನೀನು. ಬೇರೆ ರಾಷ್ಟ್ರ ಕಟ್ಟಿಕೊಂಡು ಸನಾತನ ಧರ್ಮ ಆದರೂ ಮಾಡಿಕೊ, ಮನಸ್ಮೃತಿ ಆದರೂ ಮಾಡಿಕೊಂಡು ಹೋಗ್ರಿ. ಯಾವುದಾದರೂ ಧರ್ಮ ಕಟ್ಟಿಕೊಂಡು ಹೋಗಿ. ಪ್ರತ್ಯೇಕ ಮಾಡಿಕೊಂಡು ಬಿಡಿ. ಖಾವಿ ಹಾಕಿಕೊಂಡು ಬಾಯಿಗೆ ಬಂದ ಹಾಗೆ ಮಾತನಾಡುವುದನ್ನು ಯಾರೂ ಕೇಳುವುದಿಲ್ಲ. ಇಂತಹ ಬಹಳ ಜನ ಗುರುಗಳು ಬಂದು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದೇಶ್ವರ ಶ್ರೀ ಕಟ್ಟಿದ ಮಠ ಹಾಳು ಮಾಡಿದ್ರಿ: ಸಿದ್ದೇಶ್ವರ ಸ್ವಾಮೀಜಿ ಎಷ್ಟು ಸರಳ ಸಜ್ಜನ ವ್ಯಕ್ತಿ. ಮಾನವೀಯತೆ ಎಂದರೇನು ಅನ್ನೋದನ್ನ ಜಗತ್ತಿಗೆ ತೋರಿಸಿಕೊಟ್ಟಂತಹ ಸ್ವಾಮಿಗಳು. ಸಿದ್ದೇಶ್ವರ ಶ್ರೀಗಳು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅಂತಹ ಪವಿತ್ರವಾದ ಕ್ಷೇತ್ರಕ್ಕೆ ಹೋಗಿ ಇದನ್ನು ಕೂಡಿಸುತ್ತಿದ್ದಾರೆ. ಈತ ಏನ್ ಮಾಡುತ್ತಿದ್ದಾನೆ, ಯಾವ ಸಿದ್ಧಾಂತದ ಮೇಲೆ ಸಿದ್ದೇಶ್ವರ ಶ್ರೀಗಳು ನಡೆಯುತ್ತಿದ್ದರು. ಸಿದ್ದೇಶ್ವರ ಶ್ರೀಗಳು ಕಟ್ಟಿದ ಮಠವನ್ನು ಇವರೆಲ್ಲ ಸೇರಿ ಹಾಳು ಮಾಡುತ್ತಿದ್ದಾರೆ. ಹಾಳು ಮಾಡುವ ಉದ್ದೇಶದಲ್ಲಿ ಅಲ್ಲೇ ಇದಾನಲ್ಲ ಇನ್ನೊಬ್ಬ. ಎಲ್ಲ ಹಾಳು ಮಾಡಲು ಹಚ್ಚಿದವನೇ ಅವನು. ಏನು ಹಾಳು ಮಾಡಿದರೆ ಏನು ಹಾಳಾಗೋದಿಲ್ಲ. ಜನ ಪ್ರಜ್ಞಾವಂತರಿದ್ದಾರೆ ಜನ ಅರ್ಥ ಮಾಡಿಕೊಂಡಿದ್ದಾರೆ. ಪವಿತ್ರವಾದ ಸಂವಿಧಾನ ಪ್ರಕಾರ ನಾವು ನಡೆಯುತ್ತಿದ್ದೇವೆ ಎಂದು ಪರೋಕ್ಷವಾಗಿ ಯತ್ನಾಳ್ ಹೆಸರು ಹೇಳದೆ ಕಾಶಪ್ಪನವರ ವಾಗ್ದಾಳಿ ನಡೆಸಿದರು.
ಬೀದಿ ನಾಯಿ ಕೂರಿಸಿದರೆ ಏನಾಗ್ತದೆ?: ಅಂತಹ ಪವಿತ್ರ ಜಾಗಕ್ಕೆ ಹೋಗಿ ಬೀದಿಯಲ್ಲಿ ಒದರುವಂತಹ ನಾಯಿ ಕೂರಿಸಿದರೆ ಏನಾಗುತ್ತದೆ ಎಂದು ಕನ್ಹೇರಿ ಶ್ರೀಗಳನ್ನು ನಾಯಿಗೆ ಹೋಲಿಸಿದ ಕಾಶಪ್ಪನವರ ಯಾವುದರ ಮೇಲೆ ಹೋಗಿ ಏನನ್ನೋ ಕೂರಿಸಿದರೆ ಏನೋ ಮಾಡಿತಂತೆ ಹಾಗೆ ಇದು ಎಂದರು.ಕನ್ಹೇರಿ ಶ್ರೀಗಳಿಗೆ ಹುಚ್ಚು ಹಿಡಿದಿದೆ. ನಾನೇ ಶ್ರೇಷ್ಠ, ನಾನೇ ದೇವರು ಅನ್ನೋರಿಗೆ ಏನು ಹೇಳುತ್ತೀರಿ. ಕನ್ಹೇರಿ ಶ್ರೀ ಏನಾದ್ರೂ ಆಕಾಶದಿಂದ ಉದುರಿ ಬಂದಿದ್ದಾನಾ? ಅವನೂ ಮನುಷ್ಯನಾಗಿಯೇ ಹುಟ್ಟಿದ್ದಾನೆ, ತಾಯಿ ಹೊಟ್ಟೆಯಲ್ಲೇ ಜನಿಸಿದ್ದಾನೆ. ಸ್ವಾಮಿ ಆದ ತಕ್ಷಣ ಆಕಾಶದಿಂದ ಇಳಿದು ಬಂದಿದ್ದಾನಾ? ಈ ಜಗತ್ತಿನಲ್ಲಿ ದೇವಮಾನವ ಎಂದು ಯಾರಾದರೂ ಇದ್ದಾರಾ? ಖಾವಿ ಹಾಕಿ ಇವರ ಬಾಯಲ್ಲಿ ಬರುವಂತಹ ಮಾತುಗಳಾ ಇವು. ಖಾವಿ ಬಿಟ್ಟು ಖಾದಿ ಹಾಕೊಂಡು ಮಾತನಾಡಲಿಕ್ಕೆ ಬಾ.
- ವಿಜಯಾನಂದ ಕಾಶಪ್ಪನವರ, ಶಾಸಕರು