ಗಂಗಾವತಿ: ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್‌ನಿಂದ ಹಿರೇಬೆಕಲ್ ಮೋರೆರ ಬೆಟ್ಟದ ಶಿಲಾ ಸಮಾಧಿಗಳು ಬೆಳಕಿಗೆ ಬಂದಿವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಪ್ರಶಂಸಿದರು.

ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನ ವೇದಿಕೆಯಲ್ಲಿ ಹಿರೇಬೆಣಕಲ್ ಮೋರೆರ ಸಾಂಸ್ಕೃತಿಕ ಪ್ರತಿಷ್ಠಾನ, ಹಾಗೂ ಪರಿಸರ ಸೇವಾ ಟ್ರಸ್ಟ್ ಏರ್ಪಡಿಸಿದ್ದ “ಹಿರೇಬೆಣಕಲ್ ಮೋರೆರ ಸಾಂಸ್ಕೃತಿಕ ಸಂಭ್ರಮ” ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕು ದಶಕಗಳ ಹಿಂದೆ ಹಿರೇಬೆಣಕಲ್ ಬೆಟ್ಟದಲ್ಲಿರುವ ಮೋರೆರ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಕೇಳಿದ್ದಲ್ಲದೆ ಆ ಸ್ಥಳ ವೀಕ್ಷಣೆ ಮಾಡಿದ್ದೆ. ಈ ಪ್ರದೇಶ ಅಭಿವೃದ್ಧಿಪಡಿಸಲು ಸರ್ಕಾರ ಮುಂದೆ ಬರಬೇಕು. ಇತ್ತೀಚೆಗೆ ಸರ್ಕಾರ ಮೋರೆರ ಬೆಟ್ಟದ ಬಳಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿತ್ತು. ಹೋರಾಟ ನಡೆಸಿದ್ದರಿಂದ ರದ್ದಾಯಿತು. ಕೂಡಲೆ ಸರ್ಕಾರ ಐತಿಹಾಸಿಕ ಪ್ರದೇಶಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್, ಮೋರೆರ ಬೆಟ್ಟದಲ್ಲಿರುವ ಶಿಲಾ ಸಮಾಧಿಗಳ ಬಗ್ಗೆ ಇತಿಹಾಸ ಇದೆ. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ 7 ಅದ್ಭುತಗಳ ಪರಿಚಯದ ಸಂದರ್ಭದಲ್ಲಿ ಹಿರೇಬೆಣಕಲ್‌ಗೆ ಪ್ರಥಮ ಸ್ಥಾನ ನೀಡಿ ಬೆಳಕು ಚೆಲ್ಲಿತು ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಿರೇಬೆಣಕಲ್ ಇತಿಹಾಸ ಪ್ರಸಿದ್ಧವಾಗಿದ್ದು, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ ಎಂದರು.


ಹಿರೇಬೆಣಕಲ್ ಮೋರೆರ ಸಾಂಸ್ಕೃತಿಕ ಪ್ರತಿಷ್ಠಾನದ ಮಂಜುನಾಥ ಗುಡ್ಲಾನೂರ ಅವರು ಮೋರೆರ ಶಿಲಾ ಸಮಾಧಿಗಳು ಮತ್ತು ಅಭಿವೃದ್ಧಿಯ ಕುರಿತು ವಿವರಿಸಿದರು. ಇದೇ ವೇಳೆ ಸಾಧಕರನ್ನು ಗೌರವಿಸಲಾಯಿತು.

ತಲೇಖಾನ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಎಚ್.ಎಸ್. ಮುರಳೀಧರ, ಲಲಿತರಾಣಿ ಶ್ರೀರಂಗದೇವರಾಯಲು, ಡಾ. ಸೋಮರಾಜು, ಡಾ. ಚಂದ್ರಪ್ಪ, ಹಾಸ್ಯ ಕಲಾವಿದರಾದ ಬಿ. ಪ್ರಾಣೇಶ, ನರಸಿಂಹ ಜೋಷಿ, ಪತ್ರಕರ್ತ ರಾಮಮೂರ್ತಿ ನವಲಿ, ಟಿ. ಆಂಜನೇಯ, ಡಾ. ಸುಲೋಚನ ಚಿನಿವಾಲರ, ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಿ ಗುಡ್ಲಾನೂರ, ಡಾ. ಬದರಿಪ್ರಸಾದ್, ಶಿಕ್ಷಕ ಶರಣಪ್ಪ ಹಕ್ಕಂಡಿ, ವಿರೂಪಾಕ್ಷಪ್ಪ ಶಿರವಾರ, ಮಾರುತಿ ಐಲಿ ಉಪಸ್ಥಿತರಿದ್ದರು.