ಸಾರಾಂಶ
ಗಜೇಂದ್ರಗಡದ ಗ್ರಾಮದೇವತೆ ಹಿರೇದುರ್ಗಾದೇವಿ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ದುರ್ಗಾದೇವಿಯ ದರ್ಶನ ಪಡೆದು ಪುನೀತರಾದರು.
ಗಜೇಂದ್ರಗಡ: ಪಟ್ಟಣದ ಗ್ರಾಮದೇವತೆ ಹಿರೇದುರ್ಗಾದೇವಿ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ವೈಭವದಿಂದ ನಡೆಯಿತು.
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಎತ್ತಿನಗಾಡಿ ಹಾಗೂ ವಿವಿಧ ವಾಹನ ಮೂಲಕ ಸೋಮವಾರವೇ ಆಗಮಿಸಿ ಬಿಡಾರ ಹೂಡಿದ್ದರು. ಬಟ್ಟೆ ಪತಾಕೆಯೊಂದಿಗೆ ವಿವಿಧ ಹೂ-ಕದಳಿಯಿಂದ ರಥ ಅಲಂಕರಿಸಲಾಗಿತ್ತು.ಬೆಳಗ್ಗೆ ದೇವಿಗೆ ಮಹಾಭಿಷೇಕ, ವಿಶೇಷ ಪೂಜಾ ಅಲಂಕಾರಿಕಾ ಪೂಜೆ ನಡೆಯಿತು. ದೇವಸ್ಥಾನದ ಅರ್ಚಕರು ದುರ್ಗಾದೇವಿಯ ಉತ್ಸವ ಮೂರ್ತಿಯನ್ನು ಕರೆತಂದು ರಥದಲ್ಲಿ ಕೂರಿಸಿದರು. ಆನಂತರ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾಲಕಿ ಉತ್ಸವದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ದುರ್ಗಾ ಮಾತಾಕೀ ಜೈ ಎಂದು ಝೇಂಕಾರ ಹಾಕುತ್ತಾ ಮಹಾ ರಥೋತ್ಸವವನ್ನು ಭಕ್ತರು ವೈಭವದಿಂದ ಎಳೆದರು. ನೆರದ ಭಕ್ತರು ರಥಕ್ಕೆ ಉತ್ತತಿ, ಬಾಳೆಹಣ್ಣುಗಳನ್ನು ಸಮರ್ಪಿಸಿದರು.
ರಥ ಮರಳಿ ಸ್ವ ಸ್ಥಳಕ್ಕೆ ಬಂದು ನಿಂತಾಗ ಭಕ್ತರು ಚಪ್ಪಾಳೆ ತಟ್ಟಿ ಭಕ್ತಿ ಭಾವ ಮರೆದರು. ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ನೆರೆಯ ಸಾವಿರಾರು ಭಕ್ತರು ಆಗಮಿಸಿ ದುರ್ಗಾದೇವಿಯ ದರ್ಶನ ಪಡೆದು ಪುನೀತರಾದರು. ಸ್ಥಳೀಯ ಪುರಸಭೆ ಆಡಳಿತ ಬಂದ ಭಕ್ತರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರೆ, ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಒದಗಿಸಿತ್ತು.ಬಸವರಾಜ ಬಂಕದ, ಮುದಿಯಪ್ಪ ಮುಧೋಳ, ಮಂಗಳಾ ದೇಶಮುಖ, ಯಶರಾಜ್ ಘೋರ್ಪಡೆ, ಯಲ್ಲಪ್ಪ ಬಂಕದ, ಶರಣಪ್ಪ ಚಳಗೇರಿ, ಮಾರುತಿ ಕಲ್ಲೊಡ್ಡರ, ದುರಗಪ್ಪ ಮುಧೋಳ, ಎಫ್.ಎಸ್. ಕರಿದುರಗನವರ, ಷಣ್ಮುಖಪ್ಪ ಚಿಲ್‌ಝರಿ, ವೆಂಕಟೇಶ ಬಂಕದ, ಯಲ್ಲಪ್ಪ ಮನ್ನೇರಾಳ, ಹನುಮಂತ ಲಕ್ಕಲಕಟ್ಟಿ ಪಾಲ್ಗೊಂಡಿದ್ದರು.