ಯುವ ಸಾಹಿತಿಗಳಿಗೆ ಡಿಎನ್‌ ಅಕ್ಕಿ ಮಾದರಿ: ವೆಂಕಟೇಶ್

| Published : Mar 07 2024, 01:49 AM IST

ಸಾರಾಂಶ

ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದಲ್ಲಿ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷ ಸಾಹಿತಿ ಡಿ.ಎನ್. ಅಕ್ಕಿ ಅವರ ಬದುಕು ಬರಹ ಕುರಿತು ಹಿರಿಯ ಪತ್ರಕರ್ತ ವೆಂಕಟೇಶ್ ಮಾನು ವಿಚಾರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಬಹುಮುಖ ಪ್ರತಿಭೆಯುಳ್ಳ ಸರಳ ಸಜ್ಜನಿಕೆ ವ್ಯಕ್ತಿತ್ವದ ಸಾಹಿತಿ, ಸಂಶೋಧಕ ಡಿಎನ್ ಅಕ್ಕಿಯವರು ರಚಿಸಿದ ಕೃತಿಗಳಲ್ಲಿ ಮೌಲ್ಯಯುತ ಬರಹ ಕಾಣಬಹುದು. ಸಂಶೋಧನೆ, ಸಾಹಿತ್ಯ, ವ್ಯಂಗ್ಯ ಚಿತ್ರಗಳ ಮೂಲಕ ನಾಡಿನುದ್ದಕ್ಕೂ ಚಿರಪರಿಚಿತರಾಗಿರುವ ಇವರು, ಇಂದಿನ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದು ಹಿರಿಯ ಪತ್ರಕರ್ತ ವೆಂಕಟೇಶ್ ಮಾನು ಹೇಳಿದರು.

ತಾಲೂಕಿನ ಭೀಮರಾಯನ ಗುಡಿಯ ಸಿದ್ಧಾರೂಢ ಮಠದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಿಎನ್‌ ಅಕ್ಕಿ ಬದುಕು ಬರಹ ಕುರಿತು ವಿಚಾರ ಮಂಡನೆ ಮಾಡಿದ ಅವರು, ಕವಿತೆ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ ಎಂದರು.

ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ಧಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದಲೂ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಸಂಶೋಧನೆ, ಕವನ ಸಂಕಲನ, ವ್ಯಕ್ತಿಚಿತ್ರ ಸೇರಿ ಸುಮಾರು 24ಕ್ಕೂ ಅಧಿಕ ಕೃತಿಗಳು, ನಾಡಿನುದ್ದಕ್ಕೂ 31ಕ್ಕೂ ಅಧಿಕ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ ಎಂದರು.

ಬರವಣಿಗೆಯಲ್ಲಿ ಸತ್ವ ಇರಬೇಕು. ಸಾತ್ವಿಕ ಮತ್ತು ತಾತ್ವಿಕ ಚಿಂತನೆಯಿಂದ ಎಲ್ಲರಿಗೂ ನೆಮ್ಮದಿ ಸಿಗಲು ಸಾಧ್ಯವಿದೆ. ಜೀವನದಲ್ಲಿ ಸಾತ್ವಿಕತೆ ರೂಢಿಸಿಕೊಂಡಾತ ಸುಖಿಯಾಗಿರುತ್ತಾನೆ. ತನ್ನ ಜೀವನಮೌಲ್ಯಗಳಿಂದ ಪ್ರಸಿದ್ಧನಾದ ವ್ಯಕ್ತಿ ಸಮಾಜದಲ್ಲಿ ಎಂದಿಗೂ ಗುರುತಿಸಲ್ಪಡುತ್ತಾನೆ. ಎನ್ನುವುದಕ್ಕೆ ಸರಳ ಸಜ್ಜನಿಕೆ ವ್ಯಕ್ತಿತ್ವದ ವ್ಯಕ್ತಿ ಸಾಹಿತಿ ಸಂಶೋಧಕ ಡಿಎನ್ ಅಕ್ಕಿ ಅವರ ಆದರ್ಶ ಜೀವನ ನಮ್ಮ ಕಣ್ಣೆದುರು ಬರುತ್ತದೆ. ಅವರು ಬರೆದ ಎಲ್ಲಾ ಕೃತಿಗಳಲ್ಲಿ ಮೌಲ್ಯಯುತ ಬರಹ ಕಾಣಬಹುದಾಗಿದೆ ಎಂದರು.

ಸೃಜನಶೀಲ ಸಾಹಿತ್ಯ ರಚನೆ ಮೂಲ ಆಶಯ ಸತ್ಯಗಳ ಹುಡುಕಾಟ ಆಗಿರಬೇಕು. ಇಂದಿನ ಯುವ ಲೇಖಕರು ಮೌಲ್ಯಯುತ ಸಾಹಿತ್ಯ ರಚನೆ ಮಾಡಬೇಕಾದರೆ ಬಹುಮುಖ ಸತ್ಯದ ಶೋಧನೆಯಲ್ಲಿ ತೊಡಗುವುದು ಅವಶ್ಯ ಎನ್ನುವುದು ಅಕ್ಕಿ ಅವರ ಯುವ ಲೇಖಕರಿಗೆ ಸಲಹೆಯಾಗಿದೆ ಎಂದರು.

ಡಾ.ಸಾಯಬಣ್ಣ ಮುಡುಬೂಳ ಅವರು ಆಶಯನ್ನುಡಿಗಳನ್ನಾಡಿದರು. ವಿಮರ್ಶಕ ಸಿ.ಎಸ್. ಭೀಮರಾಯ, ಉಪನ್ಯಾಸಕ ಪತ್ರಕರ್ತ ರಾಘವೇಂದ್ರ ಹಾರಣಗೇರಾ, ಶೇಖರ್ ದೊರೆ, ಶಿವಪ್ರಸಾದ್ ಕರದಳ್ಳಿ, ಭೀಮರಾಯ ಬಡಿಗೇರ್ ಅಬ್ದುಲ್ ಹಾದಿಮನಿ ಇದ್ದರು. ಜ್ಯೋತಿ ದೇವಣ್ಗಾವ್ ಅವರು ನಿರೂಪಿಸಿ, ವಂದಿಸಿದರು.