ಸಾರಾಂಶ
ಮೈಸೂರಿನಲ್ಲಿ ದುರಸ್ತಿಗೊಂಡಿರುವ ಜ.ತಿಮ್ಮಯ್ಯ ಪ್ರತಿಮೆ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಮಡಿಕೇರಿಯಲ್ಲಿ ಮರುಪ್ರತಿಷ್ಠಾಪನೆಗೊಳ್ಳಲಿದ್ದು, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಉದ್ಘಾಟಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಂಜಿನ ನಗರಿಯ ಹೃದಯ ಭಾಗದಲ್ಲಿದ್ದ ಜನರಲ್ ತಿಮ್ಮಯ್ಯ ಪ್ರತಿಮೆ ಭಗ್ನವಾಗಿ 6 ತಿಂಗಳು ಕಳೆದಿದ್ದು, ಇದೀಗ ಮರು ಪ್ರತಿಷ್ಠಾಪನೆಗೆ ದಿನಾಂಕ ನಿಗದಿಯಾಗಿದೆ.ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಜ.ತಿಮ್ಮಯ್ಯ ಪ್ರತಿಮೆ ಮರುಪ್ರತಿಷ್ಠಾಪನೆಗೊಳ್ಳಲಿದ್ದು, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಿಯಾದ ಪ್ರತಿಮೆಯ ದುರಸ್ತಿ ಕಾರ್ಯ ಮೈಸೂರಿನಲ್ಲಿ ನಡೆದಿದ್ದು, ಭವ್ಯ ಮೆರವಣಿಗೆ ಮೂಲಕ ಅಲ್ಲಿಂದ ಹೊರಟು ಕುಶಾಲನಗರದ ಗಡಿಯಲ್ಲಿ ಅದ್ಧೂರಿ ಸ್ವಾಗತ ಕೋರಿ ಮಡಿಕೇರಿಗೆ ಕರೆತರಲಾಗುವುದು. 50ಕ್ಕೂ ಹೆಚ್ಚು ಕಾರು ಮತ್ತು 100ಕ್ಕೂ ಅಧಿಕ ಬೈಕ್‌ಗಳು ಮೆರವಣಿಗೆಗೆ ರಂಗು ನೀಡಲಿವೆ ಎಂದರು.
ಈ ಸಂದರ್ಭ ಕೊಡಗಿನ ಸಂಸದರು, ಶಾಸಕದ್ವಯರು, ಕೊಡವ ಸಮಾಜದ ಪ್ರಮುಖರು, ಜನರಲ್ ತಿಮ್ಮಯ್ಯ ಫೋರಂ, ಮಾಜಿ ಸೈನಿಕರು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಜನರಲ್ ತಿಮ್ಮಯ್ಯ ಕುರಿತಾದ ಮಾಹಿತಿಯನ್ನು ಟ್ಯಾಬ್ಲೋದಲ್ಲಿ ಪ್ರದರ್ಶಿಸಲಾಗುತ್ತದೆ. ಜಿಲ್ಲಾಡಳಿತ ಮತ್ತು ನಗರಸಭೆ ಅಧೀನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮುತ್ತಪ್ಪ ತಿಳಿಸಿದರು. ಜನರಲ್ ತಿಮ್ಮಯ್ಯ ಪ್ರತಿಮೆ ದುರಸ್ತಿಗೆ ರು.3.17 ಲಕ್ಷ ಖರ್ಚಾಗಿದ್ದು, ಒಟ್ಟು ರು. 17 ಲಕ್ಷ ವೆಚ್ಚದಲ್ಲಿ ತಿಮ್ಮಯ್ಯ ಪ್ರತಿಮೆ ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಕೆಎಸ್‌ಆರ್‌ಟಿಸಿ 4 ಲಕ್ಷ ರು. ಭರಿಸಿದೆ ಎಂದು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು. ಮಡಿಕೇರಿ ಕೊಡವ ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್, ನಿರ್ದೇಶಕರಾದ ಕಾಳಚಂಡ ಅಪ್ಪಣ್ಣ, ಕೇಕಡ ವಿಜು ದೇವಯ್ಯ, ಚೊಟ್ಟಂಗಡ ಸಂಜು ಕಾವೇರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.