ಸೈಬರ್‌ ಭದ್ರತಾ ನೀತಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ: ಡಾ। ಜಿ.ಪರಮೇಶ್ವರ್‌

| Published : Mar 07 2024, 01:49 AM IST / Updated: Mar 07 2024, 02:58 PM IST

ಸೈಬರ್‌ ಭದ್ರತಾ ನೀತಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ: ಡಾ। ಜಿ.ಪರಮೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸೈಬರ್‌ ವಂಚನೆ ತಡೆಯಲು ಮತ್ತು ಜನರ ದತ್ತಾಂಶ ದುರುಪಯೋಗ ತಡೆಯಲು ಸೈಬರ್‌ ಸೆಕ್ಯೂರಿಟಿ ನೀತಿ ಜಾರಿಗೆ ಯೋಜಿಸಲಾಗಿದೆ ಎಂದು ಡಾ। ಜಿ.ಪರಮೇಶ್ವರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ರಂಗದ ಅನುಕೂಲಕ್ಕಾಗಿ ಶೀಘ್ರದಲ್ಲೇ ಸೈಬರ್‌ ಸೆಕ್ಯೂರಿಟಿ ಪಾಲಿಸಿ ಜಾರಿಗೊಳಿಸಲು ಯೋಜಿಸಲಾಗುತ್ತಿದೆ ಎಂದು ರಾಜ್ಯ ಗೃಹ ಮಂತ್ರಿ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದ ಪಂಚಾತಾರಾ ಹೋಟೆಲ್‌ವೊಂದರಲ್ಲಿ ರಾಜ್ಯ ಪೊಲೀಸ್ ಇಲಾಖೆ, ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಹಾಗೂ ಸೈಬರ್ ಕ್ರೈಂ ತನಿಖಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯು ಬುಧವಾರ ಆಯೋಜಿಸಿದ್ದ ‘ಸೈಬರ್ ಅಪರಾಧ ತನಿಖಾ‌ ಶೃಂಗ ಸಭೆ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. 

ರಾಜ್ಯದಲ್ಲಿ ಸೈಬರ್ ಸೆಕ್ಯೂರಿಟಿ ಪಾಲಿಸಿಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಐಟಿ ಹಬ್ ಎಂದು ಗುರುತಿಸಿಕೊಂಡಿರುವ ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಚಟುವಟಿಕೆಗಳ ಮತ್ತಷ್ಟು ಉತ್ತೇಜಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅನ್ಯರಾಜ್ಯಗಳಿಗೆ ಹೋಲಿಸಿದರೆ ನಾವು ಮುಂದೆ ಸಾಗಿದ್ದೇವೆ ಎಂದು ಆಶಿಸಿದರು.

ಅಜ್ಞಾತವಾಗಿದ್ದುಕೊಂಡೇ ಬೆದರಿಕೆ, ವಂಚನೆ ಸೇರಿ ಸೈಬರ್ ದಾಳಿ ನಡೆಸುತ್ತಿದ್ದಾರೆ. ಈ ದುಷ್ಕರ್ಮಿಗಳ ಕಾಟದಿಂದ ಮಾರುಕಟ್ಟೆ ಹಾಗೂ ಬಂಡವಾಳ ಹೂಡಿಕೆ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೇಸರಿಸಿದರು.

ಇತ್ತೀಚಿಗೆ ಡೀಪ್‌ಫೇಕ್, ಅಕ್ರಮ ಹಣ ವರ್ಗಾವಣೆ, ಆನ್ಲೈನ್ ಬ್ಯಾಂಕಿಂಗ್ ಹಾಗೂ ಲೋನ್ ಆ್ಯಪ್ ವಂಚನೆ ಹೀಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. 

ಈ ಪ್ರಕರಣಗಳಲ್ಲಿ ತನಿಖೆಯಲ್ಲಿ ವಿದೇಶಿ ಕಂಪನಿಗಳ ನೆರವು ಅಗತ್ಯವಾಗಿದೆ. ಈಗ ಜಾಗತಿ ಮಟ್ಟದಲ್ಲಿ ಸೈಬರ್ ಕ್ರೈಂ ಸಮಸ್ಯೆಯಾಗಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರದ ಸೇವೆಗಳನ್ನು ಡಿಜಿಟಲ್‌ ಮೂಲಕವೇ ಕಾರ್ಯರೂಪಕ್ಕಿಳಿಸಲಾಗುತ್ತಿದೆ. ಇದಕ್ಕಾಗಿ ಸೇವಾಸಿಂಧು ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ರೀತಿಯ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಆದರೆ ಈ ಡಿಜಿಟಲ್ ಸೇವೆಗಳನ್ನು ಬಳಸುವ ಮುನ್ನ ಸೈಬರ್ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಜನರು ಜಾಗೃತರಾಬೇಕು ಎಂದು ತಿಳಿಸಿದರು.

ಸೈಬರ್ ವಂಚನೆಗೊಳಗಾದ ಜನರಿಗೆ ರಾಜ್ಯದ ಎಲ್ಲ 43 ಸೈಬರ್ ಕ್ರೈಮ್ (ಸಿಇಎನ್‌) ಠಾಣೆಗಳು ಸುರಕ್ಷತೆ ಒದಗಿಸುವ ಕೆಲಸ ಮಾಡುತ್ತಿವೆ. ಹ್ಯಾಕಿಂಗ್ ಮೂಲಕ ಜನರ ವೈಯಕ್ತಿಕ ದತ್ತಾಂಶ ದೋಚಲು ಸೈಬರ್‌ ಕ್ರಿಮಿನಲ್‌ಗಳು ಹೊಂಚು ಹಾಕುತ್ತಿದ್ದಾರೆ. ಹೀಗಾಗಿ ದತ್ತಾಂಶವನ್ನು ಸುರಕ್ಷಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗದ ಬಲ ಹೆಚ್ಚಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳ ನೆರವು ಪಡೆದುಕೊಳ್ಳಲಾಗುತ್ತಿದೆ. 

ಈ ತಾಂತ್ರಿಕ ತಜ್ಞರ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದ್ದು, ಈಗಾಗಲೇ ಪೊಲೀಸ್, ನ್ಯಾಯಾಂಗ ಮತ್ತು ಭಾರತೀಯ ರಕ್ಷಣೆ ಪಡೆಗಳ ಸೇರಿ ಸುಮಾರು 33 ಸಾವಿರಕ್ಕೂ ಜನರಿಗೆ ಸಿಐಡಿ ಕಚೇರಿಯಲ್ಲಿರುವ ಸಿಸಿಐಟಿಆರ್‌ನಲ್ಲಿ ತರಬೇತಿ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ, ಎಡಿಜಿಪಿ ಪ್ರಣವ್‌ ಮೊಹಂತಿ,‌ ಇನ್ಫೋಸಿಸ್ ಫೌಂಡೇಷನ್‌ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ್ ಹಾಗೂ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯ ಸಿಇಓ ವಿನಾಯಕ್ ಗೋಡ್ಸೆ ಉಪಸ್ಥಿತರಿದ್ದರು‌.