ಸಾರಾಂಶ
ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಸುರಿದ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ಭೂಮಿ ಹದಗೊಳಿಸಲು ಕಾದು ಕುಳಿತಿದ್ದ ರೈತರು ಮಳೆಯಿಂದ ಖುಷಿಯಾಗಿದ್ದಾರೆ.
ಕುಕನೂರು:
ಬಿರು ಬಿಸಿಲಿನಿಂದ ಕಾದು ಕೆಂಡವಾಗಿದ್ದ ಧರೆಗೆ ಮಂಗಳವಾರ ಬೆಳಗ್ಗೆಯಿಂದ ಸುರಿದ ಮಳೆ ತಂಪೆರೆದಿದೆ. ಸೋಮವಾರ ತಡರಾತ್ರಿಯೂ ಸಹ ಕೆಲವೆಡೆ ಮಳೆ ಆಗಿದೆ. ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನದಿಂದ ಸಹ ಮಳೆ ಬೆಂಬಿಡದೆ ಸುರಿದಿದೆ. ಇದರಿಂದ ಬಳಗೇರಿ ಗ್ರಾಮ ಹಾಗೂ ಬೂದಗುಂಪಾ ಗ್ರಾಮ ಸಂಪರ್ಕಿಸುವ ರಸ್ತೆಯ ಮಧ್ಯೆದಲ್ಲಿರುವ ಹಿರೇಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೇ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದರಿಂದ ಬಳಗೇರಿ, ಬೂದಗುಂಪಾ, ಮಂಗಳೂರು ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಸುರಿದ ಮುಂಗಾರು ಮಳೆ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ಭೂಮಿ ಹದಗೊಳಿಸಲು ಕಾದು ಕುಳಿತಿದ್ದ ರೈತರು ಮಳೆಯಿಂದ ಖುಷಿಯಾಗಿದ್ದಾರೆ. ಕೃಷಿ ಚಟುವಟಿಕೆಗಳು ಚುರುಕಾಗಲಿದ್ದು ಬಿತ್ತನೆಗೆ ಸಿದ್ಧತೆ, ಬೀಜ, ಗೊಬ್ಬರ ಖರೀದಿಗೆ ಮಳೆ ಅನುಕೂಲ ಕಲ್ಪಿಸಿದೆ.
ತುಂಬಿ ಹರಿದ ಹಳ್ಳಗಳು:ಸೋಮವಾರ ರಾತ್ರಿ, ಮಂಗಳವಾರ ಸುರಿದ ಮಳೆಗೆ ಹಳ್ಳಗಳು ತುಂಬಿ ಹರಿದಿವೆ. ಜಮೀನುಗಳ ಬದುವುಗಳು ಕೊಚ್ಚಿವೆ. ಕೃಷಿ ಹೊಂಡಗಳು ಭರ್ತಿಯಾಗಿವೆ.
ಬಳಗೇರಿ-ಬೂದಗುಂಪಾ ಮಧ್ಯೆದಲ್ಲಿರುವ ಹಿರೇಹಳ್ಳಕ್ಕೆ ಮೇಲ್ಸೇತುವೆ ಕಾಮಗಾರಿ ಸಹ ಪ್ರಗತಿಯಲ್ಲಿದೆ. ಸದ್ಯ ಜನರು ಇನ್ನೂ ಹಳ್ಳದ ಮಧ್ಯೆದ ರಸ್ತೆಯನ್ನು ಸಂಪರ್ಕಕ್ಕೆ ಅವಲಂಬಿಸಿದ್ದು, ನೀರಿನ ರಭಸಕ್ಕೆ ಹಳ್ಳದ ರಸ್ತೆ ಕೊಚ್ಚಿಹೋಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಬೂದಗುಂಪಾದಿಂದ ಬಳಗೇರಿ ಮಾರ್ಗವಾಗಿ ಕುಕನೂರು ಪಟ್ಟಣಕ್ಕೆ ಆಗಮಿಸುವ ದ್ಯಾರ್ಥಿಗಳಿಗೆ, ನೌಕರರಿಗೆ ಸಂಚಾರಕ್ಕೆ ಅನಾನುಕೂಲ ಆಗಿದೆ. ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಮಳೆ ದಾರಿ ಕಾದು ಕುಳಿತಿದ್ದ ರೈತರಿಗೆ ಮಳೆ ತಂಪು ನೀಡಿದೆ. ಜಾನುವಾರು, ಕುರಿಗಳಿಗೆ ನೀರಿನ ಅಭಾವ ತಪ್ಪಲಿದೆ.ಅಂದಪ್ಪ ಹುರುಳಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಇಟಗಿ ಗ್ರಾಮ