ಹಿರೇಖೇಡ-ಮಲ್ಲಿಗೆವಾಡದ ಪಡಿತರ ಹಂಚಿಕೆ ವಿವಾದ, ದೂರು

| Published : Aug 24 2024, 01:20 AM IST

ಸಾರಾಂಶ

ಕನಕಗಿರಿ ತಾಲೂಕಿನ ಹಿರೇಖೇಡ ಹಾಗೂ ಮಲ್ಲಿಗೆವಾಡ ಗ್ರಾಮಗಳ ಪಡಿತರ ಹಂಚಿಕೆದಾರ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಹಂಚಿಕೆದಾರರನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕನಕಗಿರಿ: ತಾಲೂಕಿನ ಹಿರೇಖೇಡ ಹಾಗೂ ಮಲ್ಲಿಗೆವಾಡ ಗ್ರಾಮಗಳ ಪಡಿತರ ಹಂಚಿಕೆದಾರ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಫಲಾನುಭವಿಗಳಿಗೆ ಪಡಿತರ ಹಂಚಿಕೆದಾರ ಅವಾಚ್ಯವಾಗಿ ನಿಂದಿಸುತ್ತಿದ್ದಾನೆ ಎಂದು ಹಿರೇಖೇಡ ಗ್ರಾಮಸ್ಥರು ಆರೋಪಿಸಿ ದಾಸ್ತಾನು ಗೋದಾಮಿಗೆ ಬುಧವಾರ ಬೀಗ ಹಾಕಿದ್ದರು. ಬಳಿಕ ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರಿಂದ ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್‌ ವಿಶ್ವನಾಥ ಮುರುಡಿ ಅವರಿಗೆ ಮನವಿ ಸಲ್ಲಿಸಿ, ಹಂಚಿಕೆದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೂ ಮೊದಲು ವಾಲ್ಮೀಕಿ ವೃತ್ತದಲ್ಲಿ ಆಹಾರ ಇಲಾಖೆಯ ನಿರೀಕ್ಷಕ ನವೀನ್, ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಪಡಿತರ ಹಂಚಿಕೆ ವಿಚಾರವಾಗಿ ವಾಗ್ವಾದ ನಡೆದಿದ್ದು, ಹಂಚಿಕೆದಾರರನ್ನು ಬದಲಾಯಿಸಬೇಕು. ಹಂಚಿಕೆದಾರನನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಬಾರೇಶ ನಡಲಮನಿ ಆರೋಪಿಸಿದರು.

ಗ್ರಾಪಂ ಸದಸ್ಯ ಭೀಮನಗೌಡ, ಕರಿಯಪ್ಪ, ಕೆಂಚಪ್ಪ, ಬಾರಿಮರದಪ್ಪ ಬಂಗಾರಿ, ವೆಂಕಟೇಶ ಮಲ್ಲಿಗೆವಾಡ, ಬಾರೇಶ ನಡುಲಮನಿ, ಹನುಮಂತ ಮಲ್ಲಿಗೆವಾಡ, ಮುದಿಯಪ್ಪ ಮಲ್ಲಿಗೆವಾಡ, ವಿನಯಕುಮಾರ, ರವಿತೇಜ ಸೇರಿ ಹಲವರಿದ್ದರು.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಎರಡು ಗ್ರಾಮಗಳ ಪಡಿತರ ಹಂಚಿಕೆಯಲ್ಲಿ ಕೆಲವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹಂಚಿಕೆದಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಮುಖಂಡರು ಹಂಚಿಕೆದಾರನ ಮೇಲೆ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದೂ ಹೇಳಲಾಗಿದೆ. ಅಧಿಕಾರಿಗಳು ವಿಚಾರಣೆ ನಡೆಸಿದರೆ ಮತ್ತಷ್ಟು ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ.