ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಕಳವು ಆರೋಪಿಗಳಾದ ಅಸ್ಸಾಂ ಮೂಲದ ಇಬ್ಬರನ್ನು ಕೊಡಗು ಪೊಲೀಸರು ಕೃತ್ಯ ನಡೆದ 8 ದಿನಗಳಲ್ಲಿಯೇ ಅಸ್ಸಾಂ ಮೂಲದ ಇಬ್ಬರನ್ನು ಬಂಧಿಸಿದೆ.ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ರಾಮಜರಾಜನ್ ಪ್ರಕರಣ ಕುರಿತು ಮಾಹಿತಿ ನೀಡಿದರು. ಕಾಂತೂರು-ಮೂರ್ನಾಡು ಗ್ರಾಮದ ತೆಕ್ಕಡ ಪ್ರಸನ್ನ ಅವರ ತೋಟದ ಲೈನ್ ಮನೆಯಲ್ಲಿ ವಾಸವಿರುವ, ಅಸ್ಸಾಂ ಮೂಲದ ಅಲ್ತಾಬ್ ಆಲಿ (27) ಹಾಗೂ ಮೀರ್ ಹುಸೇನ್ (36) ಬಂಧಿತರು.
ಆರೋಪಿಗಳಿಂದ ಕಳವು ಮಾಡಿದ್ದ 3 ಗ್ರಾಂ ಚಿನ್ನದ ಮಾಂಗಲ್ಯ, 111 ಗ್ರಾಂ ಬೆಳ್ಳಿಯ ಕಿರೀಟ, 59 ಗ್ರಾಂ ಬೆಳ್ಳಿಯ ದೃಷ್ಟಿ ಬೊಟ್ಟು ಆಭರಣ ಹಾಗೂ ರು.95,501 ನಗದು ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ಹಿನ್ನೆಲೆ:ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಆ.16ರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಮುಖ್ಯ ದ್ವಾರದ ಬೀಗ ಮುರಿದು ದೇವಸ್ಥಾನದ 2 ಭಂಡಾರದ ಹುಂಡಿ ಒಡೆದಿದ್ದರು. ಅಂದಾಜು ರು.2.5 ಲಕ್ಷ ನಗದು ಹಾಗೂ ದೇವಿಯ ಮೂರ್ತಿಗೆ ಅಳವಡಿಸಿದ್ದ ಸುಮಾರು ರು.1.16 ಲಕ್ಷ ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳವಾದ ಕುರಿತು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಸೋಮಯ್ಯ ದೂರು ನೀಡಿದ್ದರು.
ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿಎಸ್‌ಪಿ ಮಹೇಶ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರು.ಡಿ.ಎಸ್.ಪಿ. ಮಹೇಶ್ ಕುಮಾರ್, ಸಿ.ಪಿ.ಐ ರಾಜು ಪಿ.ಕೆ , ಪಿ.ಎಸ್.ಐ ಲೋಕೇಶ್ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿ, ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ಪ್ರಕರಣದ ಆರೋಪಿಗಳನ್ನು ಆ.22ರಂದು ಬಂಧಿಸಲಾಗಿದೆ.ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೊಡಗು ಎಸ್ಪಿ ರಾಮರಾಜನ್ ಶ್ಲಾಘಿಸಿದ್ದಾರೆ.
ವಿಶೇಷ ಸೂಚನೆ: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ / ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪೊಲೀಸರು ವಿನಂತಿಸಿದ್ದಾರೆ.ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.