ಸಾರಾಂಶ
ಗುಂಡ್ಲುಪೇಟೆ : ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಹಿರೀಕಾಟಿ ಖನಿಜ ತನಿಖಾ ಠಾಣೆ ಸಿಬ್ಬಂದಿಯಿಲ್ಲದೆ ತಿಂಗಳಾಯ್ತು.! ಆದರೆ ಚೆಕ್‌ಪೋಸ್ಟ್‌ನ ತಗಡಿನ ಬಾಗಿಲು ತೆರೆದಾಂಗೆ ಜಿಲ್ಲಾಡಳಿತ ನೋಡಿ ಕೊಂಡಿದ್ದೇ ಸಾಧನೆ. ಕ್ವಾರಿ ಲೀಸ್‌ದಾರರು ಹಾಗೂ ಕ್ರಷರ್ ಮಾಲಿಕರ ಒತ್ತಡಕ್ಕೆ ಮಣಿಯಿತೇ ಜಿಲ್ಲಾಡಳಿತ ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರಕ್ಕೆ ರಾಜಧನ ವಂಚನೆ ಆಗುತ್ತಿದೆ ಎಂದು ಕನ್ನಡಪ್ರಭ ಪತ್ರಿಕೆ ಹತ್ತಾರು ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ತಾಲೂಕಿನ ಹಿರೀಕಾಟಿ ಖನಿಜ ತನಿಖಾ ಠಾಣೆಯನ್ನು ಒಲ್ಲದ ಮನಸ್ಸಿನಿಂದಲೇ ಆರಂಭಿಸಿತು.
ಆದರೆ ತನ್ನೆಲ್ಲ ಜವಬ್ದಾರಿ ಮರೆತು ಕ್ರಷರ್ ಹಾಗೂ ಕ್ವಾರಿ ಮಾಲಿಕರ ಲಾಬಿಗೆ ಮಣಿದು ಚೆಕ್‌ಪೋಸ್ಟ್‌ಗೆ ಸಿಬ್ಬಂದಿ ನೇಮಿಸಲು ಆಗದಷ್ಟು ದುರ್ಬಲವಾಗಿದೆ. ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಕ್ವಾರಿ, ಕ್ರಷರ್‌ಗೆ ಹಾಗೂ ಬ್ಲಾಸ್ಟಿಂಗ್‌ಗೆ ಅನುಮತಿ ನೀಡದಿದ್ದಕ್ಕೆ ಮಾತ್ರ ಸೀಮಿತವಾದಂತಿದೆ. ಆದರೆ ರಾಜಧನ ವಂಚಿಸಿ ದಿನ ನಿತ್ಯ 20 ರಿಂದ 30 ಸಾವಿರ ಟನ್ ರಾ ಮೆಟಿರಿಯಲ್ ತೆಗೆಯುತ್ತಿದ್ದಾರೆ.
ಆದರೆ ಪರ್ಮಿಟ್ ಮಾತ್ರ ಶೇ.10 ರಷ್ಟು ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದರೂ ಟಿಪ್ಪರ್ ಗಳ ತಡೆದು ತಪಾಸಣೆ ಮಾಡುವ ತಾಕತ್ತು ಕಳೆದುಕೊಂಡಿದೆಯಾ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬಂದಿವೆ.ಇನ್ನೂ ಕ್ರಷರ್ ಉತ್ಪನ್ನಗಳು ಕೂಡ ಸಾವಿರಾರು ಟನ್ ಮೈಸೂರು, ಕೇರಳದತ್ತ ಎಂಡಿಪಿ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಆಗುತ್ತಿದೆ. ಅಕ್ರಮ ಸಾಗಾಣಿಕೆ ತಡೆಗೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮುಂದಾಗುತ್ತಿಲ್ಲ. ಕೇರಳದ ಮೂಲದ ವ್ಯಕ್ತಿಯೋರ್ವ ಉಸ್ತುವಾರಿಯಲ್ಲಿ ಶೇ.90 ರಷ್ಟು ಟಿಪ್ಪರ್‌ಗಳು ಎಂಡಿಪಿ ಇಲ್ಲದೆ ತೆರಳುತ್ತಿವೆ ಎನ್ನಲಾಗಿದೆ.
ಒಂದು ಲೀಸ್ ಕ್ವಾರಿಯಲ್ಲಿ ವರ್ಷಕ್ಕೆ 20,30,40,50 ಸಾವಿರ ಟನ್ ನಷ್ಟು ವರ್ಷಕ್ಕೆ ಲೀಸ್‌ದಾರರು ಅನುಮತಿ ಪಡೆದಿದ್ದಾರೆ. ಆದರೆ 20,30,40,50 ಸಾವಿರ ಟನ್ ಕಲ್ಲು ಒಂದು ತಿಂಗಳಲ್ಲೇ ತೆಗೆದು ಮಾರಾಟ ಆಗುತ್ತಿದೆ. ಇದನ್ನು ಪಶ್ನಿಸುವ ಕೆಲಸ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಮಾಡುತ್ತಿಲ್ಲ?ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗೆ ಕಂದಾಯ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ಇಲಾಖೆಗಳಿದ್ದರೂ ಅಕ್ರಮ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳು ರಾಜಧನ ವಂಚಿಸುತ್ತಿದ್ದರೂ ಕ್ರಮಕ್ಕೆ ಮುಂದಾಗಿಲ್ಲ.
ಚೆಕ್‌ಪೋಸ್ಟ್ ಬಾಗಿಲು ತೆರೆದಿದೆ, ಒಂದು ಖಾಲಿ ಕುರ್ಚಿ ಇದೆ, ಆದರೆ ಸಿಬ್ಬಂದಿ ಇರಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಚೆಕ್ ಪೋಸ್ಟ್ ತೆಗೆಯೋಕೆ ಆಸಕ್ತಿ ಇಲ್ಲ ಎಂಬುದು ಚೆಕ್ ಪೋಸ್ಟ್ ನೋಡಿದರೆ ಸತ್ಯ ತಿಳಿಯುತ್ತದೆ. ಕ್ವಾರಿಯಲ್ಲಿ ಕಲ್ಲು ತೆಗೆಯಲು ಇಸಿ ಅನುಮತಿ ಪ್ರಕಾರ ಬ್ಲಾಸ್ಟಿಂಗ್ ಕೊಟ್ಟರೆ ಅಕ್ರಮ ತಡೆಯಲು ಸಾಧ್ಯ ಆದರೆ ನಬ್ಲಾಸ್ಟಿಂಗ್ ಯಥೇಚ್ಛವಾಗಿ ಸಿಗುವ ಕಾರಣ ಅಕ್ರಮಕ್ಕೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯೇ ಕಾರಣವಾಗಿದೆ. ಹಿರೀಕಾಟಿ ಖನಿಜ ತನಿಖಾ ಠಾಣೆಯು ಶೋ ಕೇಸಿನ ಗೊಂಬೆಯಂತಿದೆ. ಸಿಬ್ಬಂದಿ ಇಲ್ಲ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಇಲ್ಲ ಎಂದ ಮೇಲೆ ಚೆಕ್‌ಪೋಸ್ಟ್ ತೆಗೆಯೋದೇ ಸರಿ ಎಂದು ಹಿರೀಕಾಟಿ ಗ್ರಾಮದ ಯುವಕರು ಹೇಳುತ್ತಿದ್ದಾರೆ.
ಅಕ್ರಮ ಚಟುವಟಿಕೆಗೆ ತಾಣವಾದ್ರೆ
ಯಾರು ಹೊಣೆ: ಗ್ರಾಮಸ್ಥರ ಪ್ರಶ್ನೆ
ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ರಾಜಧನ ವಂಚನೆ ತಡೆಗೆ ಇರುವ ಖನಿಜ ತನಿಖಾ ಠಾಣೆ ಸಿಬ್ಬಂದಿ ಇಲ್ಲದೆ ಇದ್ದರೂ ಬಾಗಿಲು ತೆರೆದಿದೆ. ರಾತ್ರಿ ವೇಳೆ ಅಕ್ರಮ ಚಟುವಟಿಕೆ ನಡೆದರೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಎತ್ತಿದ್ದಾರೆ. ಹಿರೀಕಾಟಿ ಖನಿಜ ತನಿಖಾ ಠಾಣೆ ನೆಪಮಾತ್ರಕ್ಕೆ ಇದೆ,ಆದರೆ ಸಿಬ್ಬಂದಿ ಇಲ್ಲದಿದ್ದರೂ ಚೆಕ್ ಪೋಸ್ಟ್ ಬಾಗಿಲು ತೆರೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚೆಕ್ ಪೋಸ್ಟ್ ತೆರೆದಿದೆ ಎಂದು ತೋರಿಸಿಕೊಳ್ಳುವ ಪ್ರಹಸನ ನಡೆದಿದೆ. ಹೇಳಿ, ಕೇಳಿ ಖನಿಜ ತನಿಖಾ ಠಾಣೆ ಮೈಸೂರು-ಊಟಿ ಹೆದ್ದಾರಿಯಲ್ಲಿದೆ. ಚೆಕ್‌ಪೋಸ್ಟ್ ಬಾಗಿಲು ತೆರೆದಿರುವುದು ಅಕ್ರಮ ಚಟುವಟಿಕೆ ತಾಣವಾಗುವ ಮುನ್ನ ಎಚ್ಚೆತ್ತು ಚೆಕ್ ಪೋಸ್ಟ್ ತೆರೆದು ರಾಜಧನ ವಂಚನೆ ತಡೆಯಲಿ ಎಂಬುದು ಸಾರ್ವಜನಿಕ ಮಾತಾಗಿದೆ.