ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಹಿರೀಕಾಟಿ ಗ್ರಾಮದ ಸರ್ಕಾರಿ ಸ.ನಂ.೧೦೮ ರಲ್ಲಿ ಎಸ್‌ಸಿ, ಎಸ್‌ಟಿ ಸ್ಮಶಾನದ ಬಳಿ ಅಕ್ರಮ ಗಣಿಗಾರಿಕೆ ಸೇರಿದಂತೆ ಹೆಚ್ಚುವರಿ ಕಲ್ಲು ತೆಗೆದಿರುವುದು, ರಾಜಧನ ಬಾಕಿ ಕಟ್ಟಿಲ್ಲ. ನೂರು ಅಡಿ ಆಳ ತೆಗೆದಿರುವವರ ಮೇಲೆ ಕ್ರಮ ತೆಗೆದುಕೊಂಡಿರುವುದನ್ನು ಬಹಿರಂಗ ಪಡಿಸಬೇಕು ಎಂದು ರೈತ ಕೂಲಿ ಸಂಗ್ರಾಮ ಸಮಿತಿ(ಆರ್‌ಸಿಎಸ್‌ಎಸ್) ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿರುವ ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಎಂ.ಶಿವಣ್ಣ ಕಂದೇಗಾಲ ಕೂಡಲೇ ಬಾಕಿ ವಸೂಲಿ ಮಾಡಬೇಕು. ಹೆಚ್ಚುವರಿ ಕಲ್ಲು ತೆಗೆದಿರುವುದು, ನೂರು ಅಡಿ ಆಳ ತೆಗೆದಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಫೆ.೭ ರಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹಿರೀಕಾಟಿ ಕ್ವಾರಿಗೆ ಭೇಟಿ ನೀಡಿದಾಗ ಸತ್ಯ ಗೋಚರವಾಗಿದೆ. ಅಕ್ರಮ ಕಣ್ಣಿಗೆ ರಾಚುತ್ತಿದ್ದರೂ ಇಲ್ಲಿಯ ತನಕ ಅಕ್ರಮ ಎಸಗಿದ ಲೀಸ್‌ದಾರರ ಮೇಲೆ ಕ್ರಮ ತೆಗೆದುಕೊಳ್ಳಲು ಇರುವ ಅಡ್ಡಿಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.ಹಿರೀಕಾಟಿ ಸರ್ಕಾರಿ ಸ.ನಂ.೧೦೮ ರಲ್ಲಿ ಲೀಸ್ ಸಂಖ್ಯೆ ೨೬೭ ಮತ್ತು ೨೬೮ ರಲ್ಲಿ ಆರ್.ಯಶವಂತಕುಮಾರ್, ಲೀಸ್ ಸಂಖ್ಯೆ ೩೦೨ ರಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್ ಪತ್ನಿ ಸೀನಾ ಕ್ಲೇವಿಯರ್, ಲೀಸ್ ಸಂಖ್ಯೆ ೨೬೯ ರಲ್ಲಿ ಎಚ್.ಪಿ.ಕಿರಣ್, ಲೀಸ್ ಸಂಖ್ಯೆ ೩೦೯ ರಲ್ಲಿ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಡಿ.ಪಿ.ಜಗದೀಶ್, ಲೀಸ್ ಸಂಖ್ಯೆ ೧೫೦ ರಲ್ಲಿ ಗೀತಾ ಗಣೇಶ್, ಲೀಸ್ ಸಂಖ್ಯೆ ೧೫೩ ರಲ್ಲಿ ಗಾಯತ್ರಿ ಪುಟ್ಟಣ್ಣ ಸೇರಿದಂತೆ ಇನ್ನು ಹಲವರು ಲೀಸ್‌ಗಿಂತ ಹೆಚ್ಚುವರಿ ಕಲ್ಲು ತೆಗೆದಿದ್ದಾರೆ. ಕೋಟ್ಯಾಂತರ ರಾಜ ಧನ ಬಾಕಿಯಿದೆ. ನೂರಾಡಿಗಿಂತಲೂ ಹೆಚ್ಚು ಆಳದಲ್ಲಿ ಗಣಿಗಾರಿಕೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಎಂ.ಶಿವಣ್ಣ ಕಂದೇಗಾಲ ಹೇಳಿಕೆ ನೀಡಿದ್ದು ಕೂಡಲೇ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಲೀಸ್ ಅನ್ನು ಅಮಾನತ್ತಿನಲ್ಲಿಟ್ಟು ಬಾಕಿ ಇರುವ ಕೋಟ್ಯಾಂತರ ರಾಜಧನ ವಸೂಲಿ ಮಾಡಬೇಕು. ಬಾಕಿ ಕಟ್ಟುವ ತನಕ ಪರ್ಮಿಟ್ ನೀಡಬಾರದು. ಅಲ್ಲದೆ ನಿಯಮ ಮೀರಿ ಆಳ ಮತ್ತು ಅಗಲದಲ್ಲಿ ಗಣಿಗಾರಿಕೆ ನಡೆಸಿರುವುದಕ್ಕೆ ದಂಡ ಹಾಗೂ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿರೀಕಾಟಿ ಕ್ವಾರಿಯಲ್ಲಿ ಲೀಸ್‌ದಾರರಲ್ಲಿ ಬಹುತೇಕರು ನಿಯಮ ಮೀರಿ ಗಣಿಗಾರಿಕೆ ನಡೆಸಿದ್ದಾರೆ ಹಾಗಾಗಿ ಹೆಚ್ಚುವರಿ ಕಲ್ಲು ತೆಗೆದಿರುವ ಸ್ಥಳಕ್ಕೆ ಮಣ್ಣು ಮುಚ್ಚಿ ದಂಡ ತಪ್ಪಿಸಲು ಹೊರಟಿದ್ದಾರೆ ಹಾಗಾಗಿ ಹಿರೀಕಾಟಿ ಕ್ವಾರಿಯ ಸರ್ವೇ ನಡೆಸುವ ತನಕ ಕ್ವಾರಿ ಕೆಲಸ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.