ಸಾರಾಂಶ
ಕಾರವಾರ: ಭೂಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಿ, ಭೂಕುಸಿತ ಸಂಭವಿಸುವುದರ ಬಗ್ಗೆ ಮುಂಚಿತವಾಗಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯಕ್ತಿ(ಸ್ಪಾಟರ್ಸ್)ಗಳನ್ನು ನಿಯೋಜಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಮತ್ತು ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿ ಮುನ್ನೆಚರಿಕೆ ವಹಿಸುವ ಉದ್ದೇಶದಿಂದ ಈ ಯೋಜನೆ ಮಾಡಲಾಗಿದೆ.ಭಾರತೀಯ ಭೂವಿಜ್ಞಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ 439 ಅಪಾಯಕಾರಿ ಭೂಕುಸಿತ ಸ್ಥಳಗಳನ್ನು ಗುರುತಿಸಲಾಗಿದೆ. ರಾಜ್ಯ ಸರ್ಕಾರದಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದೆ. ಗುರುತಿಸಲಾದ ಸ್ಥಳಗಳ ಪಟ್ಟಿಗಳನ್ನು ಈ ಅಪಾಯಕಾರಿ ಭೂಕುಸಿತ ಸ್ಥಳಗಳಲ್ಲಿ ತಮ್ಮ ವ್ಯಾಪಿಯಲ್ಲಿ ಬರುವ ಸ್ಥಳಗಳಿಗೆ, ಸೂಕ್ತ ಗುರುತು ಮಾಡುವ ವ್ಯಕ್ತಿಗಳನ್ನು ಆಯಾ ತಾಲೂಕುಗಳ ಹಂತದಲ್ಲಿ ನಿಯೋಜಿಸಿ, ಆ ಭೂಕುಸಿತ ಪ್ರದೇಶಗಳ ಮೇಲೆ ನಿಗಾ ವಹಿಸುವ ಕುರಿತಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಭಾರತೀಯ ಭೂವಿಜ್ಞಾನ ಇಲಾಖೆಯ ವರದಿಯಂತೆ, ಅಂಕೋಲಾ ತಾಲೂಕಿನಲ್ಲಿ 39, ಭಟ್ಕಳದಲ್ಲಿ 1, ಹಳಿಯಾಳದಲ್ಲಿ 13, ಹೊನ್ನಾವರದಲ್ಲಿ 92, ಜೋಯಿಡಾದಲ್ಲಿ 56, ಕಾರವಾರದಲ್ಲಿ 34, ಕುಮಟಾದಲ್ಲಿ 48, ಮುಂಡಗೋಡದಲ್ಲಿ 1, ಸಿದ್ದಾಪುರದಲ್ಲಿ 58, ಶಿರಸಿಯಲ್ಲಿ 59 ಹಾಗೂ ಯಲ್ಲಾಪುರದಲ್ಲಿ 38 ಸೇರಿದಂತೆ ಒಟ್ಟು 439 ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ.ಅಪಾಯಕಾರಿ ಭೂಕುಸಿತ ಸ್ಥಳಗಳ ಮೇಲೆ ನಿಗಾ ವಹಿಸಲು ನಿಯೋಜಿಸುವ ಗುರುತು ಮಾಡುವ ವ್ಯಕ್ತಿಗಳಿಗೆ ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ ತರಬೇತಿ ನೀಡಲಾಗುವುದು. ಗುರುತು ಮಾಡುವ ವ್ಯಕ್ತಿಗಳು ಪ್ರತಿನಿತ್ಯ ಅಂತಹ ಸ್ಥಳವನ್ನು ಪರಿಶೀಲಿಸಿದ ಬಗ್ಗೆ ಅಲ್ಲಿನ ಸ್ಥಿತಿಗತಿಗಳ ಅವಲೋಕನ ಮಾಡಿ ಕಚೇರಿಗೆ ವರದಿಯನ್ನು ಸಲ್ಲಿಸಬೇಕಾಗಿದೆ.
ಪ್ರಸ್ತುತ ಗುರುತಿಸಲಾಗಿರುವ ಭೂಕುಸಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಗುರುತು ಮಾಡುವ ವ್ಯಕ್ತಿ(ಸ್ಪಾಟರ್ಸ್)ಗಳನ್ನಾಗಿ ನೇಮಿಸಲು ಉದ್ದೇಶಿಸಲಾಗಿದ್ದು, ಇವರಿಂದ ಭೂಕುಸಿತದ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಹಾಗೂ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.