ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಹೋಳಿ ಹಬ್ಬ ಆಚರಣೆ ಸಮಿತಿಯಿಂದ ಮಂಗಳವಾರ ಸಂಜೆ ಹೋಳಿ ಉತ್ಸವ ಉದ್ಘಾಟನಾ ಸಮಾರಂಭ ನಗರದ ಬಸವೇಶ್ವರ ವೃತ್ತದ ಬಳಿಯ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ನಡೆಯಲಿದೆ ಎಂದು ಹೋಳಿ ಹಬ್ಬ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಮುಖಂಡರಾದ ಮಲ್ಲಿಕಾರ್ಜುನ ಮೇಟಿ ಉದ್ಘಾಟಿಸಲಿದ್ದು, ಹೋಳಿ ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮಾರುತಿ ಶಿಂಧೆ, ಬಾಬುದಾರರಾದ ನರಸಿಂಹ ಮಧ್ವರಾಜ ಕುಲಕರ್ಣಿ, ಪತ್ರಕರ್ತ ರವಿ ಹಳ್ಳೂರ, ಉಪನ್ಯಾಸಕ ಮೋಹನ ದೇಶಪಾಂಡೆ ಆಗಮಿಸಲಿದ್ದಾರೆಂದರು.
ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಮಾತನಾಡಿ, ಮಂಗಳವಾರ ಸಂಜೆ ಹೋಳಿ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ನಂತರ ಕಿಲ್ಲಾ ಓಣಿಯ ಕಾಮದಹನ ನಡೆಯಲಿದೆ. ನಂತರ ಮಾ.4ರಂದು ಬೆಳಗ್ಗೆಯಿಂದ ರಾತ್ರಿವರೆಗೆ ಬಾಗಲಕೋಟೆ ನಗರ, ವಿದ್ಯಾಗಿರಿ, ನವನಗರ ಸೇರಿ ಎಲ್ಲೆಡೆಯ ಕಾಮದಹನ ಜರುಗಲಿದೆ. ಮಾ.5 ರಿಂದ 7ರವರೆಗೆ ಮೂರು ದಿನಗಳ ಕಾಲ ಬಣ್ಣದಾಟ ನಡೆಯಲಿದ್ದು, 5 ಓಣಿಗಳ ಸೋಗಿನ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.ವಿದ್ಯಾಗಿರಿ, ನವನಗರದಲ್ಲಿಯೂ ಸೋಗಿನ ಪ್ರದರ್ಶನ, ಬಣ್ಣದ ಗಾಡಿಗಳ ಮೆರವಣಿಗೆ ನಡೆಯಲಿವೆ. ಊರಿನ ಯುವಕರು ಊರು ಬಿಟ್ಟು ಹೋಗಬಾರದು. ಶಾಂತಿ ಸೌಹಾರ್ದತೆಯಿಂದ ಹೋಳಿ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.
ಮಾ.6ರಂದು ರೇನ್ ಡ್ಯಾನ್ಸ್ ;
ಹೋಳಿ ಹಬ್ಬದ ಎರಡನೇ ದಿನ ಮಾ.6ರಂದು ನಗರದ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 4.30ರವರೆಗೆ ರೇನ್ ಡ್ಯಾನ್ಸ್ ಆಯೋಜನೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಹುಬ್ಬಳ್ಳಿಯಿಂದ ಡಿಜಿ ಆಪರೇಟರ್ ಹಾಗೂ ಡ್ಸಾನ್ಸರ್ ಆಗಮಿಸಲಿದ್ದಾರೆಂದು ವೀರಣ್ಣ ಬಂಗಾರಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿವುಕುಮಾರ ಮೇಲ್ನಾಡ, ಸಂಜೀವ ವಾಡಕರ್, ರಾಜು ನಾಯಕ ಉಪಸ್ಥಿತರಿದ್ದರು.