ಸಮಾಜಸೇವಕರಾದ ಶ್ರೀ ಕೆ.ವಿ.ನವೀನ್ ಕಿರಣ್ ಅವರು 2006ರಿಂದ ಪ್ರತಿ ವರ್ಷ ಜುಲೈನಲ್ಲಿ ಚಿಕ್ಕಬಳ್ಳಾಪುರ ನಗರದ ಸಿ.ವಿ.ವಿ. ಕ್ಯಾಂಪಸ್‌ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದಾರೆ. ಎಂದಿನಂತೆ ಈ ವರ್ಷವೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರತಿ ಎರಡು ಸೆಕೆಂಡಿಗೆ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಉಂಟಾಗುತ್ತದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ಮಾನವ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ರಕ್ತದಾನಿಗಳಿಂದ ದೊರೆಯುವ ರಕ್ತವೇ ಅನೇಕ ರೋಗಿಗಳ ಜೀವ ಉಳಿಸುವ ಅಮೂಲ್ಯ ಸಂಪನ್ಮೂಲವಾಗಿದೆ ಎಂದು ಕೆ.ವಿ.ನವೀನ್ ಕಿರಣ್ ಅವರು ತಿಳಿಸಿದರು.

ಸಮಾಜಸೇವಕರಾದ ಶ್ರೀ ಕೆ.ವಿ.ನವೀನ್ ಕಿರಣ್ ಅವರು 2006ರಿಂದ ಪ್ರತಿ ವರ್ಷ ಜುಲೈನಲ್ಲಿ ಚಿಕ್ಕಬಳ್ಳಾಪುರ ನಗರದ ಸಿ.ವಿ.ವಿ. ಕ್ಯಾಂಪಸ್‌ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದಾರೆ. ಎಂದಿನಂತೆ ಈ ವರ್ಷವೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ವರ್ಷದ ಶಿಬಿರದಲ್ಲಿ ಕೇವಲ 8 ಗಂಟೆಗಳ ಅವಧಿಯಲ್ಲಿ 4,237 ಯೂನಿಟ್ ರಕ್ತ ಸಂಗ್ರಹಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಲಾಗಿದೆ. ಈ ಸಾಧನೆಯ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ರಕ್ತದಾನಿಗಳ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಹತ್ವದ ಶಿಬಿರದಲ್ಲಿ ಕರ್ನಾಟಕ ರಾಜ್ಯ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಚಿಕ್ಕಬಳ್ಳಾಪುರ ಘಟಕ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಘಟಕಗಳು, ಶಿವಮೊಗ್ಗ, ಕೊಪ್ಪಳ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ರಕ್ತನಿಧಿ ಕೇಂದ್ರಗಳು, ಲಯನ್ಸ್ ಕ್ಲಬ್, ಎಸ್.ಎನ್.ಆರ್., ಜಿಲ್ಲಾ ಆಸ್ಪತ್ರೆ ಹಾಗೂ ಒಟ್ಟು 12 ರಕ್ತನಿಧಿ ಕೇಂದ್ರಗಳು ಭಾಗವಹಿಸಿ ಯಶಸ್ವಿಯಾಗಿ ರಕ್ತ ಸಂಗ್ರಹಿಸಿವೆ.

ವಿಶೇಷ ಅಭಿನಂದನೆ:

ಈ ಐತಿಹಾಸಿಕ ಹಾಗೂ ಬೃಹತ್ ರಕ್ತದಾನ ಶಿಬಿರದ ಯಶಸ್ವಿ ಆಯೋಜನೆಯಲ್ಲಿ ಟಿ.ಕೆ.ಪಾಟೀಲ್ ಬೆಣಕಟ್ಟಿ ಚಾರಿಟಬಲ್ ಟ್ರಸ್ಟ್, ವಿಜಯಪುರದ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲ ಅವರ ಸಹಯೋಗ ಮಹತ್ವದ ಪಾತ್ರ ವಹಿಸಿತು. ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಅವರ ಸೇವೆಯನ್ನು ಗೌರವಿಸಿ, ಶಿಬಿರದ ಸಂದರ್ಭದಲ್ಲಿ ಶ್ರೀ ಕೆ. ವಿ. ನವೀನ್ ಕಿರಣ್ ಅವರು ಶ್ರೀ ಬಸಂತಕುಮಾರ ಪಾಟೀಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.