ಸಾರಾಂಶ
65 ಅಡಿ ಸಾಮರ್ಥ್ಯದ ಕೆರೆ ।ಮಂಗಳವಾರ,ಶುಕ್ರವಾರ ಮಾತ್ರ ಕೋಡಿ ಬೀಳುವುದು ವಿಶೇಷ
ಕನ್ನಡಪ್ರಭ ವಾರ್ತೆ, ಕಡೂರುಬರಪೀಡಿತ ಬಯಲು ಪ್ರದೇಶ ಕಡೂರು ತಾಲೂಕಿನ ಜನರ ಜೀವನಾಡಿ ಆಗಿರುವ ಐತಿಹಾಸಿಕ ಮದಗದ ಕೆರೆ ಶುಕ್ರವಾರ ಭರ್ತಿಯಾಗಿ ಕೋಡಿಬಿದ್ದು ಹರಿಯಲಾರಂಭಿಸಿರುವುದು ತಾಲೂಕಿನ ಜನರು ಮತ್ತು ರೈತರಲ್ಲಿ ಸಂತಸ ತಂದಿದೆ.ಕೆರೆಯ ಅಧಿದೇವತೆ ಶ್ರೀ ಕೆಂಚಮ್ಮದೇವಿ ಮಡಿಲಲ್ಲಿರುವ 65 ಅಡಿ ಸಾಮರ್ಥ್ಯದ ಮದಗದ ಕೆರೆ ಗುರುವಾರ ಸಂಪೂರ್ಣ ಭರ್ತಿಯಾಗಿತ್ತು. ಮಂಗಳವಾರ ಅಥವಾ ಶುಕ್ರವಾರ ಮಾತ್ರ ಈ ಕೆರೆ ಕೋಡಿ ಬಿದ್ದು ಹರಿಯುವುದು ವಿಶೇಷ. ಇದು ಈ ಬಾರಿಯೂ ಮುಂದುವರಿದಿದೆ. ಕೋಡಿ ಮೇಲೆ ಒಂದು ಅಡಿಗೂ ಹೆಚ್ಚು ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ಮನಮೋಹಕವಾಗಿ ಕಾಣುತ್ತಿದೆ. ಸುರಿವ ಮಳೆಯಲ್ಲಿಯೂ ಕೆರೆ ಕೋಡಿ ಹರಿಯುವ ದೃಶ್ಯ ನೋಡಲು ಜನರು ಬರುತ್ತಿದ್ದಾರೆ.ಮದಗದ ಕೆರೆಯಿಂದ ನೀರು ತಾಲೂಕಿನ 35 ಕ್ಕೂ ಹೆಚ್ಚು ಸರಣಿ ಕೆರೆಗಳಿಗೆ ಹರಿಯುತ್ತದೆ. ಸಮುದ್ರದಂತೆ ಕಾಣುವ ಮದಗದ ಕೆರೆ 2036 ಎಕರೆ ವಿಸ್ತೀರ್ಣದ ಬೃಹತ್ ಕೆರೆಯಾಗಿದ್ದು, ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಮಧ್ಯದಲ್ಲಿ ಈ ಕೆರೆ ಇದ್ದು, ಮಲೆನಾಡಿನಲ್ಲಿ ಆಗುವ ಭಾರೀ ಮಳೆಯಿಂದ ಕೆರೆಗೆ ನೀರು ಬರುತ್ತಿದೆ.
ಈ ಕೆರೆ ತುಂಬುವ ಕಾರಣ ಕಡೂರು ತಾಲೂಕಿನ ನೀರಿನ ಬವಣೆ ತಪ್ಪುವ ಜೊತೆ ನೀರು ಕೋಡಿ ಬಿದ್ದು ಮಾರಿಕಣಿವೆ ಡ್ಯಾಂ ಸೇರುತ್ತದೆ. ಕೆರೆಯ ಸುತ್ತಮುತ್ತಲಿನ 34 ಹಳ್ಳಿಯ ಜನ-ಜಾನುವಾರುಗಳಿಗೂ ನೀರು ಲಭ್ಯವಾಗಲಿದೆ.ಕೋಡಿ ಬೀಳುವ ಹಂತದಲ್ಲಿ ಅಯ್ಯನಕೆರೆ: ತಾಲೂಕಿನ ಮತ್ತೊಂದು ಜೀವನಾಡಿಯಾದ ಸಖರಾಯಪಟ್ಟಣದ ಅಯ್ಯನಕೆರೆ ಸಹ ತುಂಬುವ ಹಂತದಲ್ಲಿದೆ. ಇವೆರಡೂ ಕೆರೆಗಳ ನೀರು ಸೇರಿ ಹರಿದರೆ ತಾಲೂಕಿನ ಏಕೈಕ ನದಿ ವೇದಾನದಿಯಾಗಿ ಹರಿಯುತ್ತದೆ.ಮದಗದ ಕೆರೆ ಕೋಡಿ ಹರಿದರೆ ತಾಲೂಕಿನಲ್ಲಿ ಮಳೆ ಬರುವುದಿಲ್ಲವೆಂಬ ಪ್ರತೀತಿ ಇದೆ. ಶುಕ್ರವಾರ ದಿನವಿಡೀ ಬಿಟ್ಟು ಬಿಟ್ಟು ಧಾರಾಕಾರ ಮಳೆ ಬರುತ್ತಿದ್ದರಿಂದ ಜನರ ದೈನಂದಿನ ಕಾರ್ಯಕ್ಕೆ ಸ್ವಲ್ಪಮಟ್ಟಿಗೆ ತೊಂದರೆ ಆಯಿತು.ಎಚ್ಚರಿಕೆ: ಈ ಎರಡೂ ಕೆರೆಗಳ ನೀರು ಹೊರಹರಿವು ಹೆಚ್ಚಾಗಿರುವುದರಿಂದ ಈ ಕೆರೆ ಪಾತ್ರಗಳ ಹಳ್ಳಗಳ ಬಳಿ ರೈತರು ಜಾನುವಾರುಗಳನ್ನು ಬಿಡದೆ ಎಚ್ಚರದಿಂದ ಇರಬೇಕೆಂದು ತಹಸೀಲ್ದಾರ್ ಮಂಜುನಾಥ್ ಪ್ರಕಟಣೆ ನೀಡಿದ್ದಾರೆ.
. 26ಕೆಕೆಡಿಯು2. ಮೈದುಂಬಿ ಹರಿಯುತ್ತಿರುವ ಮದಗದಕೆರೆ.