ಚರಿತ್ರೆ, ಸಾಹಿತ್ಯ ಈ ದೇಶದ ಎರಡು ಕಣ್ಣುಗಳಿದ್ದಂತೆ

| Published : Jan 22 2024, 02:18 AM IST

ಸಾರಾಂಶ

ಸ್ಥಳೀಯವಾಗಿ ಇತಿಹಾಸ ಸಂಶೋಧನೆಯನ್ನು ಮಾಡುವ ಮೂಲಕ ಭವ್ಯತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಬೇಕಿದೆ.

ಸ್ಥಳೀಯ ಚರಿತ್ರೆಯ ಸಂಶೋಧನಾ ಸಾಧ್ಯತೆಗಳು: ರಾಷ್ಟ್ರೀಯ ಕಾರ್ಯಾಗಾರದಲ್ಲಿ ಹಂಪಿ ವಿವಿ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ

ಕನ್ನಡಪ್ರಭ ವಾರ್ತೆ ಹಾವೇರಿ

ಭಾರತೀಯ ಚಾರಿತ್ರಿಕ ಇತಿಹಾಸದಲ್ಲಿ ಹುದುಗಿರುವ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚು ಸಂಶೋಧನೆ ಮಾಡುವತ್ತ ಯುವಕರು ಚಿತ್ತ ಹರಿಸಬೇಕಿದೆ. ಸ್ಥಳೀಯವಾಗಿ ಇತಿಹಾಸ ಸಂಶೋಧನೆಯನ್ನು ಮಾಡುವ ಮೂಲಕ ಭವ್ಯತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಹೇಳಿದರು.

ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗ ಹಾಗೂ ಕಾಲೇಜಿನ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಸ್ಥಳೀಯ ಚರಿತ್ರೆಯ ಸಂಶೋಧನಾ ಸಾಧ್ಯತೆಗಳು ವಿಷಯವಾಗಿ ಜರುಗಿದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಯ ಭರಾಟೆಯತ್ತ ಯುವ ಸಮೂಹ ಮುಳುಗಿರುವುದು ವಿಷಾದನೀಯ. ಭಾರತದ ಚರಿತ್ರೆ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅನಿವಾರ್ಯವಾಗಿದೆ. ನಾಗಾಲೋಟದಲ್ಲಿ ಸಾಗುತ್ತಿರುವ ಸಮೂಹವಿಂದು ತಾಳ್ಮೆ, ಸಹನೆಯನ್ನು ಕಳೆದುಕೊಂಡಿದೆ. ಏನೆಲ್ಲವನ್ನೂ ಕೊಡುಗೆಯಾಗಿ ನೀಡಿದ ಈ ದೇಶದ ಪರಿಪೂರ್ಣ ಇತಿಹಾಸದ ಅರಿವು ಮತ್ತು ತಿಳಿವು ಒಡಮೂಡಿದಾಗ ಪೂರ್ಣತೆ ಸಾಧ್ಯವಿದೆ. ಈ ನಾಡಿನ ರಾಜಮಹಾರಾಜರು ಅನೇಕ ದೇಗುಲಗಳನ್ನು ಅತ್ಯಂತ ಕಲಾತ್ಮಕವಾಗಿ ಶಿಲ್ಪಗಳಿಂದ ನಿರ್ಮಿಸಿದ್ದಲ್ಲದೇ ವಿವಿಧ ಪ್ರಾಕಾರಗಳಲ್ಲಿ ಕೊಡುಗೆಗಳನ್ನು ನೀಡಿರುವುದು ಶಾಸನಗಳಿಂದ, ದಾಖಲೆ ಸಂಪುಟಗಳಿಂದ ತಿಳಿದುಬರುತ್ತದೆ. ಚರಿತ್ರೆ ಮತ್ತು ಸಾಹಿತ್ಯ ಈ ದೇಶದ ಎರಡು ಕಣ್ಣುಗಳಿದ್ದಂತೆ ಎಂದರು.

ಭವಿಷ್ಯದ ಹಿತದೃಷ್ಠಿಯಿಂದ ಗ್ರಾಮೀಣ ಮಟ್ಟದ ಇತಿಹಾಸ ಸಂಶೋಧನೆಯಾದಾಗ ಇನ್ನಷ್ಟು ತಿಳಿಯಲು ಮತ್ತು ಪರಂಪರೆಯನ್ನು ಮುಂದುವರೆಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಪಸರಿಸುವ ತರುವಾಯ ಇತಿಹಾಸದ ಕುರಿತು ಕಾರ್ಯಾಗಾರ, ಚರ್ಚಾಕೂಟ, ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಬೆಳೆಯುತ್ತಿರುವ ಯುವ ಸಮೂಹಕ್ಕೆ ಹೊಸತನವನ್ನು ಪರಿಚಯಿಸುವ ಕಾರ್ಯ ಮಾಡುವತ್ತ ಹೆಜ್ಜೆ ಹಾಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರು ಮಾತನಾಡಿ, ಭಾರತದ ಇತಿಹಾಸ ಪ್ರಾಚೀನವಾದುದು. ಇಲ್ಲಿರುವಷ್ಟು ದಾಖಲೆಗಳು ಬೇರೆಲ್ಲಿಯೂ ಸಿಗಲಾರವು. ಜನಸಾಮಾನ್ಯರ ನಿತ್ಯದ ಜೀವನದೊಟ್ಟಿಗೆ ಸಂಸ್ಕೃತಿ ಬೆಸೆದುಕೊಂಡಿದೆ. ಸಂಶೋಧನಾತ್ಮಕವಾಗಿ ವ್ಯವಸ್ಥೆಗಳು ನಿರ್ಮಾಣಗೊಂಡಾಗ ಅರಿವುಂಟಾಗುತ್ತದೆ. ರಾಜಮಹಾರಾಜರುಗಳು ದೇವಸ್ಥಾನ, ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದಲ್ಲದೇ ಕುಶಲ ಶಿಲ್ಪಕಲಾಕೃತಿಗಳನ್ನು ಕೊಡುಗೆಯಾಗಿಸಿದ್ದಾರೆ. ಅವುಗಳ ಪರಿಪೂರ್ಣ ಶೋಧನೆಯಾಗಬೇಕಿದೆ ಎಂದರು.

ವೇದಿಕೆಯಲ್ಲಿ ಕಾಲೇಜು ಮಂಡಳಿ ಸದಸ್ಯ ಜೆ.ಎಸ್. ಅರಣಿ, ಮುಖ್ಯ ಭಾಷಣಕಾರರಾಗಿ ಹಂಪಿ ಕನ್ನಡ ವಿವಿಯ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅಮರೇಶ ಯತಗಲ್, ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಪ್ರೊ. ಚಲುವರಾಜು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ವೈ. ಸೋಮಶೇಖರ ಇದ್ದರು.

ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಎಸ್.ಆರ್. ಕೋರಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಪ್ರೊ. ಟಿ.ವಿ. ಚವ್ಹಾಣ ವಂದಿಸಿದರು. ಜರುಗಿದ ಒಟ್ಟು ಮೂರು ಗೋಷ್ಠಿಗಳಲ್ಲಿ ವಿವಿಧ ಕಾಲೇಜುಗಳ ೧೯೬ಕ್ಕೂ ಅಧಿಕ ಪ್ರಾಧ್ಯಾಪಕರು, ಸಂಶೋಧಕರು, ಇತಿಹಾಸಕಾರರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.