ಒಂದು ಭಾಷೆ ಎಂದರೆ ಜನರ ನಡುವೆ ಮಾತನಾಡುವಂತಹದ್ದಲ್ಲ. ಅದರ ಹಿಂದೆ ಒಂದು ಇತಿಹಾಸ, ಸಂಸ್ಕೃತಿ, ಪರಂಪರೆ ಅಡಕವಾಗಿದೆ. ಒಂದು ಭಾಷೆ ನಶಿಸಿದರೆ ಆ ಭಾಗದ ಸಂಸ್ಕೃತಿ, ಪರಂಪರೆಯೇ ನಾಶವಾದಂತೆ ಎಂದು ರಾಜ್ಯ ಸರಕಾರದ ಆರೋಗ್ಯ, ವಕ್ಫ್‌, ಹಜ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂತ್ರಿ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಒಂದು ಭಾಷೆ ಎಂದರೆ ಜನರ ನಡುವೆ ಮಾತನಾಡುವಂತಹದ್ದಲ್ಲ. ಅದರ ಹಿಂದೆ ಒಂದು ಇತಿಹಾಸ, ಸಂಸ್ಕೃತಿ, ಪರಂಪರೆ ಅಡಕವಾಗಿದೆ. ಒಂದು ಭಾಷೆ ನಶಿಸಿದರೆ ಆ ಭಾಗದ ಸಂಸ್ಕೃತಿ, ಪರಂಪರೆಯೇ ನಾಶವಾದಂತೆ ಎಂದು ರಾಜ್ಯ ಸರಕಾರದ ಆರೋಗ್ಯ, ವಕ್ಫ್‌, ಹಜ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂತ್ರಿ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮೆಳೆಕೋಟೆಯ ಧ್ಹಾನ ಪಾಲೇಸ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ, ತೆಹರೀಕ್ ಎ ಉರ್ದು ಆದಬ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿವಸ್ ಮತ್ತು ಉರ್ದು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯ ಭಾಷೆ ಉಳಿದರೆ ಮಾತ್ರ, ಅಲ್ಲಿನ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ ಎಂದರು.

ಯುವ ಜನಾಂಗ ಜಾಗತಿಕವಾಗಿ ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷನ ಜೊತೆ, ಸ್ಥಳೀಯವಾಗಿರುವ ಎಲ್ಲಾ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡಬೇಕು. ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ಸಂಪಾದನೆಗೆ ಸಹಾಯವಾಗಲಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ನೀವು ಉಳಿಯಲು ಸಹಕಾರಿಯಾಗಲಿದೆ. ಅಲ್ಲದೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಭಾಷೆಯ ಕೊರತೆಯಿಂದ ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚು. ನಾನು ಚಿಕ್ಕಂದಿನಲ್ಲಿ ಹಿಂದಿ ಕಲಿಯಲಿಲ್ಲ. ಹಿಂದಿ ಗೊತ್ತಿದ್ದರೆ ಇಂದು ರಾಷ್ಟ್ರಮಟ್ಟದ ನಾಯಕನಾಗುವ ಅವಕಾಶವಿತ್ತು. ಹಾಗಾಗಿ ನೀವು ಎಷ್ಟು ಭಾಷೆ ಕಲಿಯುತ್ತೀರೋ, ಅಷ್ಟು ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ ಎಂದು ಸಚಿವ ಯು.ಟಿ.ಖಾದರ್ ನುಡಿದರು.

ಸರಕಾರದಲ್ಲಿರುವ ಅಲ್ಪಸಮುದಾಯದ ಮಂತ್ರಿಗಳು, ಶಾಸಕರು ಸೇರಿ ಸ್ಥಗಿತವಾಗಿದ್ದ 550 ಉರ್ದು ಶಿಕ್ಷಕರ ನೇಮಕಕ್ಕೆ ಆದೇಶ ತರಲಾಗಿದೆ. ಸಮಾನತೆಗೆ ಇದು ಒತ್ತು ನೀಡಲಿದೆ. ಸರಕಾರ ಬದಲಾದ ಮಾತ್ರಕ್ಕೆ ಭಾಷೆ ಕಲಿಕೆಗೆ ಅಡ್ಡಿಯಾಗಬಾರದು ಎಂದ ಸಚಿವರು, ಶಿಕ್ಷಣವೊಂದೇ ನಮ್ಮನ್ನು ಶ್ರೀಮಂತರನ್ನಾಗಿಸುವ ಸಾಧನ. ಹಾಗಾಗಿ ಎಲ್ಲರೂ ಶಿಕ್ಷಣದ ಕಡೆಗೆ ಗಮನಹರಿಸಿ, ತಂದೆ ತಾಯಿ ಸಹ ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸಿ, ದುಡಿಮೆಗೆ ಹಚ್ಚದೆ, ಕೊನೆ ಹಂತ ತಲುಪಿಸಿ, ಅದು ನಿಮ್ಮ ಮೇಲಿರುವ ಜವಾಬ್ದಾರಿ ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಉರ್ದು ಹಬ್ಬ ಎರಡು ಒಂದೇ ದಿನ ನಡೆಯುತ್ತಿರುವ ಸಂತೋಷದ ವಿಚಾರ. ಭಾರತದ ಮೊದಲ ಶಿಕ್ಷಣ ಸಚಿವರಾಗ ಮೌಲಾನ ಅಬುಲ್ ಕಲಾಂ ಆಜಾದ ತಂದ ಹಲವಾರು ಸುಧಾರಣೆಗಳಿಂದ ಭಾರತದ ಶೈಕ್ಷಣಿಕ ವ್ಯವಸ್ಥೆಯೇ ಬದಲಾಯಿತು. ಇಂದು ಉರ್ದು ಒಂದೇ ಅಲ್ಲ. ಕನ್ನಡವೂ ಸಹ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಿಂದ ಬಿಕ್ಕಟ್ಟು ಎದುರಿಸುತ್ತಿವೆ. 2011ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 19568 ಭಾಷೆಗಳಿವೆ. ಅವುಗಳಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಸಾಂವಿಧಾನಿಕ ಮಾನ್ಯತೆ ದೊರೆತಿದೆ. ಅವುಗಳಲ್ಲಿ ಉರ್ದು ಮತ್ತು ಕನ್ನಡ ಸೇರಿರುವುದು ಶ್ಲಾಘನೀಯ ಎಂದು ಹೇಳಿದರು.

ಜಾಗತೀಕರಣದ ಫಲವಾಗಿ ವಿಶ್ವ ಮಟ್ಟದಲ್ಲಿ ಇಂಗ್ಲಿಷ್, ಭಾರತದ ಮಟ್ಟಿಗೆ ಹಿಂದಿ ವ್ಯವಹಾರಿಕ ಭಾಷೆಯಾದ ಪರಿಣಾಮ ಇತರೆ ಭಾಷೆಗಳಿಗೆ ಹಿನ್ನೆಡೆಯಾಯಿತು. ಕರ್ನಾಟಕದಲ್ಲಿ ಸುಮಾರು 290 ಭಾಷೆಗಳಿದ್ದು, ಕನ್ನಡವನ್ನು ಸುಮಾರು 4 ಕೋಟಿ ಜನರು ಮಾತನಾಡಿದರೆ, ಸುಮಾರು 30 ಲಕ್ಷ ಜನ ಉರ್ದು ಮಾತನಾಡುತ್ತಾರೆ. 10ಲಕ್ಷ ಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಬೇಕಿದೆ. ಅದಕ್ಕಾಗಿಯೇ ಅಭಿವೃದ್ದಿ ಪ್ರಾಧಿಕಾರಿ ಕರ್ನಾಟಕ ಭಾಷಾ ನೀತಿಯನ್ನು ಸರಕಾರದ ಮುಂದಿಟ್ಟಿದೆ. ಅದು ಕಾಯ್ದೆಯಾಗಿ ಬಂದರೆ ಕನ್ನಡ ಸೇರಿದಂತೆ ಕರ್ನಾಟಕದ ಎಲ್ಲಾ ಪ್ರಾದೇಶಿಕ ಭಾಷೆಗಳು ಉಳಿಯಲಿವೆ ಎಂದು ನುಡಿದರು.

ವಿಧಾನಪರಿಷತ್ ಸದಸ್ಯರಾದ ಬಲ್ಕೀಸ್ ಭಾನು ಮಾತನಾಡಿ, ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ನಮ್ಮ ಹಕ್ಕು. ಹಾಗಾಗಿ ಉರ್ದು ಶಾಲೆಗಳಿಗೆ ಶಿಕ್ಷಕರ ನೇಮಕ ತಡೆ ಹಿಡಿದಾಗ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಮ್ಮ ಹಕ್ಕುಗಳ ಪ್ರತಿಪಾದಿಸಿ, ಉರ್ದು ಶಿಕ್ಷಕರ ನೇಮಕಕ್ಕೆ ಆದೇಶ ತಂದೆವು. ಉರ್ದು ಭಾಷೆಯ ಉನ್ನತಿಗೆ ನಾವು ಹಗಲಿರುಳು ಶ್ರಮಿಸುತ್ತಿದ್ದು, ಅದನ್ನು ಬಳಸುವ, ಬೆಳೆಸುವ ಜವಾಬ್ದಾರಿ ನಿಮ್ಮದು ಎಂದರು.ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಒಮ್ಮೆ ಆರ್ಜಿ ಸಲ್ಲಿಸಿದರೆ, ಅದನ್ನೇ ಎರಡನೇ ವರ್ಷಗಳಲ್ಲಿ ಅನ್‌ಲೈನ್ ಮೂಲಕ ಅಪ್‌ಡೆಟ್ ಮಾಡಲು ಅವಕಾಶ ಕಲ್ಪಿಸಬೇಕು. ಪ್ರತಿ ವರ್ಷ ವಿದ್ಯಾರ್ಥಿಗಳು ದಾಖಲಾತಿ ಹಿಡಿದು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಪದ್ಧತಿಗೆ ತಿಲಾಂಜಲಿ ಹಾಡಬೇಕೆಂದು ಮನವಿ ಮಾಡಿದರು.

ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ಇಂದು ಬಹುತೇಕ ಹೆಣ್ಣು ಮಕ್ಕಳೇ ಶೈಕ್ಷಣಿಕವಾಗಿ ಮುಂದಿದ್ದಾರೆ. ಬಾಲಕರು ಹಿಂದೇ ಉಳಿದಿದ್ದಾರೆ. ಇಂದಿನ ಅಧುನಿಕ ಯುಗದಲ್ಲಿ ಮಹಿಳೆಯರು ತಮ್ಮ ವಿದ್ಯಾರ್ಹತೆ, ಉದ್ಯೋಗಕ್ಕೆ ಸರಿಸಮನಾದ ಗಂಡುಗಳೇ ಬೇಕೆಂದರೆ ಅರ್ಧದಷ್ಟು ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುವುದಿಲ್ಲ. ಹಾಗಾಗಿ ಗಂಡು ಮಕ್ಕಳು ಸಹ ಓದಿನ ಕಡೆಗೆ ಆಸಕ್ತಿ ತೋರಿಸಬೇಕು. ತಂದೆ ತಾಯಿ ಸಹ ಗಂಡು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ತೋರದಂತೆ ಮನವಿ ಮಾಡಿದರು.

ಅಂಜುಮಾನ್ ಇ ತಹರಿಕ್ ಉರ್ದು ಹಿಂದ್‌ನ ಅಧ್ಯಕ್ಷ ಉಬೆದುಲ್ಲಾ ಷರೀಫ್ ಮಾತನಾಡಿದರು. ತಹರೀಕ್ ಉರ್ದು ಆದಬ್‌ನ ತುಮಕೂರು ಅಧ್ಯಕ್ಷ ತಾಜುದ್ದೀನ್ ಷರೀಫ್, ಕಾರ್ಯದರ್ಶಿ ಅಫ್ಹಲ್ ಖಾನ್, ಅಂಜುಮಾನ್ ಇ ತೆಹರಿಕ್ ಉರ್ದು ಹಿಂದ್‌ನ ಕಾರ್ಯದರ್ಶಿ ಅಬ್ದುಲ್ ಹಲೀಮ್ ಮನ್ಸೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಹಿರಿಯ ಪತ್ರಕರ್ತರಾದ ಮುನೀರ್ ಅಹಮದ್, ಆರೀಫ್ ಮತೀನ್ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.