ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಇತಿಹಾಸ ಎಂಬುದು ಕೇವಲ ರಾಜರ ಚರಿತ್ರೆಯಲ್ಲ ಜನ ಜೀವನ, ಜ್ಞಾನ, ಗಣಿತ, ವಿಜ್ಞಾನ ಸೇರಿದಂತೆ ಸಮಾಜದ ನಿತ್ಯ ಜೀವನದ ಎಲ್ಲಾ ವಿಚಾರಗಳನ್ನೂ ಒಳಗೊಂಡಿದೆ ಎಂದು ಕೊಪ್ಪ ತಾಲೂಕಿನ ಇತಿಹಾಸ ಸಂಶೋಧಕ ನಾ.ಸುರೇಶಕಲ್ಕೆರೆ ಹೇಳಿದರು.ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆ ಆಶ್ರಯದಲ್ಲಿ ನಡೆದ ಪ್ರಾಚೀನ ಭಾರತದಲ್ಲಿ ಜ್ಞಾನ–ವಿಜ್ಞಾನ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ತಾಳೆಗರಿ ಬಿಡುಗಡೆ ಮಾಡಿ ಮಾತನಾಡಿ, ಪ್ರಸ್ತುತ ಆಧುನಿಕ ದಿನಗಳಲ್ಲಿರುವ ಏಕ ಮುಖ ಸಂಚಾರ ರಸ್ತೆ, ರಸ್ತೆ ವಿಭಜಕಗಳು, ಆಧುನಿಕ ಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೌಲಭ್ಯಗಳೆಲ್ಲವೂ ಸಿಂಧೂ ಹಾಗೂ ಹರಪ್ಪ ನಾಗರೀಕತೆಯಲ್ಲಿಯೇ ಇತ್ತು. ಘಾತ ಸಂಖ್ಯೆ, ದಶಮಾನದ ಘಾತ ಸಂಖ್ಯೆ ಗಳನ್ನು, ಅಕ್ಕಿ, ಕಂಚು, ತುಕ್ಕು ಹಿಡಿಯದ ಲೋಹವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಭಾರತ. ಸಾರ್ವಜನಿಕ ಆಸ್ಪತ್ರೆ ಸೌಲಭ್ಯ ಒದಗಿಸಿದ್ದು, ಗ್ರಾಮ ಪಂಚಾಯಿತಿಗೆ ಮೊದಲ ಬಾರಿ ಚುನಾವಣೆ ನಡೆಸಿದ್ದು ಚೋಳರು. ಮೌರ್ಯರು ಮೊದಲ ಕಿಮೀ ಕಲ್ಲನ್ನು ಕೊಟ್ಟವರು. ಊರಿಗೆ ಹೋಗುವ ರಸ್ತೆ, ಕಾಡಿಗೆ ಹೋಗುವ ರಸ್ತೆ ಎಷ್ಟು ಅಳತೆಯಲ್ಲಿ ರಬೇಕು ಎಂದು ಪರಿಚಯಿಸಿದವರು ಮೌರ್ಯರು. ಚೋಳರು ವಾಸ್ತುಶಿಲ್ಪಕ್ಕೆ ಅದ್ಭುತ ಕೊಡುಗೆ ನೀಡಿದ್ದರು. ಪ್ರಾಚೀನ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳ ಜತೆಗೆ ಗಣಿತ, ವಿಜ್ಞಾನ, ಬೋಗೋಳ, ಮಾನವಶಾಸ್ತ್ರವೂ ಇದೆ. ಬೇಲೂರು ಮತ್ತು ಹಳೇ ಬೀಡು ದೇವಸ್ಥಾನಗಳನ್ನು ಅತ್ಯದ್ಭುತ ತಂತ್ರಜ್ಞಾ ಬಳಸಿ ನಿರ್ಮಿಸಲಾ ಗಿದೆ. ಪ್ರಾಚೀನ ಭಾರತದಲ್ಲಿ ಆಧುನಿಕ ದಿನಗಳಲ್ಲಿ ಬಳಸು ತ್ತಿರುವ ಬಹುತೇಕ ವಿಜ್ಞಾನ, ತಂತ್ರಜ್ಞಾನದ ಅರಿವು ಇತ್ತು. ಮಲೆನಾಡಿನ ಸುತ್ತ ಮುತ್ತಲಿನ ಪ್ರದೇಶ ಗಳಲ್ಲಿ ಶಿಲಾಯುಗದ ಮನುಷ್ಯರು ವಾಸಿಸುತ್ತಿರುವ ಬಗ್ಗೆ ದಾಖಲೆಗಳು ಲಭ್ಯವಾಗಿದೆ. ಪ್ರಾಚೀನ ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ, ಗಣಿತದ ವಿಚಾರಗಳು ಯಾವ ರೀತಿಯಾಗಿತ್ತು ಎಂಬುದರ ಬಗ್ಗೆ ನಿದರ್ಶನಗಳ ಮೂಲಕ ಮಾಹಿತಿ ನೀಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶಗೌಡ ಮಾತನಾಡಿ, ಭಾರತಕ್ಕೆ10 ಸಾವಿರ ವರ್ಷಗಳ ಇತಿಹಾಸವಿದೆ. 600 ಕ್ಕೂ ಹೆಚ್ಚು ಜಾತಿಯವರು ಒಗ್ಗೂಡಿ ಬದುಕುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. 6 ಧರ್ಮದವರು ಸಮನ್ವಯದಿಂದ ಬದುಕುತ್ತಿದ್ದಾರೆ. 127 ಭೌಗೋಳಿಕ ವಾತಾವರಣ ಹೊಂದಿರುವ ಶ್ರೀಮಂತ ಸಂಸ್ಕೃತಿ ಹೊಂದಿದ ದೇಶದ ಪ್ರಜೆಗಳು ನಾವು ಎಂಬುದು ಹೆಮ್ಮೆಯ ವಿಚಾರ ಎಂದರು. ಸಭೆ ಅಧ್ಯಕ್ಷತೆಯನ್ನು ಕಾಲೇಜಿನ ಡಾ.ಧನಂಜಯ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್, ಇತಿಹಾಸ ಉಪನ್ಯಾಸಕಿ ಸವಿತಾ, ವಿದ್ಯಾರ್ಥಿನಿ ಪಂಚಮಿ ಜೈನ್ ಉಪಸ್ಥಿತರಿದ್ದರು.