ಪಿಯು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟದಲ್ಲಿ ಇತಿಹಾಸದ ಪಾಠ

| Published : Oct 26 2025, 02:00 AM IST

ಪಿಯು ವಿದ್ಯಾರ್ಥಿಗಳಿಗೆ ಚಿಕ್ಕಬೆಟ್ಟದಲ್ಲಿ ಇತಿಹಾಸದ ಪಾಠ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರವಣಬೆಳಗೊಳದ ಎಸ್.ಎನ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಚಂದ್ರಗಿರಿ ಚಿಕ್ಕಬೆಟ್ಟ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾವಿರಾರು ವರ್ಷಗಳ ಪ್ರಾಚೀನತೆ ಹೊಂದಿರುವ ಇತಿಹಾಸವನ್ನು ತಿಳಿಸುವುದು ಬಹಳ ಮುಖ್ಯವಾಗಿದ್ದು, ಶ್ರವಣಬೆಳಗೊಳದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕವಾದ ಮೌಲಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಎಂದರು. ಚಂದ್ರಗಿರಿ ಚಿಕ್ಕಬೆಟ್ಟವು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮಹತ್ವ ಹೊಂದಿದ ಸ್ಥಳ. ಕ್ರಿಸ್ತ ಪೂರ್ವದಲ್ಲಿ ಆಚಾರ್ಯ ಭದ್ರಬಾಹು ಮುನಿಗಳು ಸಹಸ್ರಾರು ತ್ಯಾಗಿಗಳೊಂದಿಗೆ ಶ್ರವಣಬೆಳಗೊಳಕ್ಕೆ ಬಂದ ಉಲ್ಲೇಖವಿದೆ. ಶ್ರವಣಬೆಳಗೊಳದಲ್ಲಿ ಒಟ್ಟು ೫೭೨ ಶಿಲಾ ಶಾಸನಗಳು ಇದ್ದು, ಅವುಗಳಲ್ಲಿ ೨೭೧ ಶಿಲಾ ಶಾಸನಗಳು ಚಂದ್ರಗಿರಿ ಬೆಟ್ಟದಲ್ಲೆ ಇವೆ.

ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ

ಸ್ಥಳೀಯ ಇತಿಹಾಸವನ್ನು ಮಕ್ಕಳಿಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇತಿಹಾಸದ ಅರಿವು, ಶಿಲಾ ಶಾಸನಗಳು ಹಾಗೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಾಂಶುಪಾಲ ಡಾ. ಎಸ್. ದಿನೇಶ್ ಹೇಳಿದರು.

ಶ್ರವಣಬೆಳಗೊಳದ ಎಸ್.ಎನ್. ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಚಂದ್ರಗಿರಿ ಚಿಕ್ಕಬೆಟ್ಟ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಾವಿರಾರು ವರ್ಷಗಳ ಪ್ರಾಚೀನತೆ ಹೊಂದಿರುವ ಇತಿಹಾಸವನ್ನು ತಿಳಿಸುವುದು ಬಹಳ ಮುಖ್ಯವಾಗಿದ್ದು, ಶ್ರವಣಬೆಳಗೊಳದ ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕವಾದ ಮೌಲಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಎಂದರು.

ಚಂದ್ರಗಿರಿ ಚಿಕ್ಕಬೆಟ್ಟವು ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಮಹತ್ವ ಹೊಂದಿದ ಸ್ಥಳ. ಕ್ರಿಸ್ತ ಪೂರ್ವದಲ್ಲಿ ಆಚಾರ್ಯ ಭದ್ರಬಾಹು ಮುನಿಗಳು ಸಹಸ್ರಾರು ತ್ಯಾಗಿಗಳೊಂದಿಗೆ ಶ್ರವಣಬೆಳಗೊಳಕ್ಕೆ ಬಂದ ಉಲ್ಲೇಖವಿದೆ. ಶ್ರವಣಬೆಳಗೊಳದಲ್ಲಿ ಒಟ್ಟು ೫೭೨ ಶಿಲಾ ಶಾಸನಗಳು ಇದ್ದು, ಅವುಗಳಲ್ಲಿ ೨೭೧ ಶಿಲಾ ಶಾಸನಗಳು ಚಂದ್ರಗಿರಿ ಬೆಟ್ಟದಲ್ಲೆ ಇವೆ. ಪ್ರಪಂಚದಲ್ಲಿ ಅತಿ ಹೆಚ್ಚು ಶಿಲಾಶಾಸನಗಳು ಒಂದೇ ಕಡೆ ದೊರೆತಿರುವುದು ಶ್ರವಣಬೆಳಗೊಳದಲ್ಲಿ ಎಂಬುದು ಹೆಮ್ಮೆಯ ಸಂಗತಿ.

ಕನ್ನಡ ಲಿಪಿಯ ಉಗಮ, ವಿಕಾಸವನ್ನು ಅರಿಯಲು ಇಲ್ಲಿನ ಶಾಸನಗಳ ಅಧ್ಯಯನ ಬಹಳ ಮಹತ್ವ ಪಡೆದಿದೆ. ಕ್ರಿ.ಶ. ೬ನೇ ಶತಮಾನದಿಂದ ೧೯ನೇ ಶತಮಾನದ ಅವದಿಯಲ್ಲಿ ರಚಿಸಲಾದ ಶಿಲಾ ಶಾಸನಗಳು ಸೇರಿದಂತೆ ೯೨ ಸ್ಮಾರಕಗಳಿದ್ದು, ೧೪ ಬಸದಿಗಳು, ೭ ನಿಷಧಿ ಮಂಟಪಗಳು, ೨ ದೊಣೆಗಳು ಹಾಗೂ ೨ ಮಾನಸ್ತಂಭಗಳು ಇಲ್ಲಿ ಲಭ್ಯವಿದೆ. ರನ್ನ ಕವಿ, ಚಾವುಂಡರಾಯ ಹಾಗೂ ಕೃಷ್ಣರಾಜೇಂದ್ರ ಒಡೆಯರ್ ಅವರ ಹಸ್ತಾಕ್ಷರವನ್ನು ಚಂದ್ರಗಿರಿ ಚಿಕ್ಕಬಿಟ್ಟದಲ್ಲಿ ಕಾಣಬಹುದು. ಇಲ್ಲಿ ೬೧ ಜನ ತ್ಯಾಗಿಗಳು ಸಲ್ಲೇಖನ ವ್ರತ ಕೈಗೊಂಡು ಸಮಾಧಿಮರಣ ಹೊಂದಿರುವ ದಾಖಲೆಗಳಿವೆ.

ಬಸದಿಗಳ ವಾಸ್ತುಶಿಲ್ಪ, ತೀಥಂಕರರ ಮೂರ್ತಿಗಳ ಶಿಲ್ಪಕಲೆ ಗಮನ ಸೆಳೆಯುತ್ತವೆ. ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಹಾಗೂ ಮೈಸೂರಿನ ಅರಸರ ಕಾಲದ ಬಸದಿಗಳು ಇಲ್ಲಿದ್ದು, ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕವಾದ ಮೌಲ್ವಿಕ ವಿಚಾರಗಳು ಚಂದ್ರಗಿರಿ ಚಿಕ್ಕಬೆಟ್ಟದಲ್ಲಿ ಅಡಗಿವೆ ಎಂದು ತಿಳಿಸಿದರು.

೨೦೧೨ರಲ್ಲಿ ಶ್ರವಣಬೆಳಗೊಳ ಜೈನಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಚಂದ್ರಗಿರಿ ಮಹೋತ್ಸವ ನಡೆದಾಗಿನಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮುಂದುವರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ವೀಣಾ, ದೀಪಾ, ನವೀನ್‌ ಕುಮಾರ್, ಶಂಕರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.