ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚರಿತ್ರೆ ಚಲನಶೀಲತೆಯಲ್ಲಿರಬೇಕು, ಇತಿಹಾಸ ಬೋಧಕರು ಸಹ ಜಡತ್ವದಿಂದ ಹೊರಬರಬೇಕು ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಅವಿನಾಶ್ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘ, ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎನ್‍ಇಪಿ ಇತಿಹಾಸ ಪಠ್ಯಕ್ರಮ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಚರಿತ್ರೆ ಕೇವಲ ಗತಕಾಲ ಮಾತ್ರ ಅಲ್ಲ, ಭೂತಕಾಲದ ಘಟನೆಗಳ ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ನಿರ್ಧರಿಸುವುದೇ ಇತಿಹಾಸ ಎಂದರು.
ಚರಿತ್ರೆಯನ್ನು ಸಂಪ್ರದಾಯಗಳ ಅಪಕಲ್ಪನೆಗಳನ್ನು ಆಚೆ ತಳ್ಳಿ ಸೈದ್ಧಾಂತಿಕ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಕಟ್ಟಬೇಕು. ಚರಿತ್ರೆ ಕೇವಲ ಮ್ಯೂಸಿಯಂ ಅಲ್ಲ, ಅದು ಜಡತ್ವವು ಆಗಬಾರದು. ಕೇವಲ ಅಂಕಿ ಅಂಶಗಳಿಂದ ಕೂಡಿರಬಾರದು. ಗತಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳನ್ನು ವರ್ತಮಾನಕ್ಕೆ ತಂದು ಮುರಿದುಕಟ್ಟಬೇಕು ಎಂದರು.ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಮಾತನಾಡಿ, ಚರಿತ್ರೆಯ ಭೋಧನೆ ಅಧ್ಯಾಪಕರಿಗೆ ಒತ್ತಡ ತರುವಂತೆ ಆಗಬಾರದು. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೂ ಆಗಬಾರದು. ಚರಿತ್ರೆಯ ಜೊತೆಗೆ ರಾಜಕಾರಣ ಬೆಸೆದುಕೊಂಡರೆ ಅಧ್ಯಾಪಕರಿಗೆ ಗೊಂದಲವಾಗುತ್ತದೆ. ಈ ಎಲ್ಲಾ ಹಿನ್ನಲೆಯಲ್ಲಿ ಇಂತಹ ಕಾರ್ಯಾಗಾರಗಳ ಮೂಲಕ ಅಧ್ಯಾಪಕರಿಗೆ ಮಾರ್ಗದರ್ಶನ ನೀಡಲು ಇತಿಹಾಸ ಅಧ್ಯಾಪಕರ ಸಂಘ ಶ್ರಮಿಸುತ್ತಿದೆ. ಇದರ ಪ್ರಯೋಜನವನ್ನು ಅಧ್ಯಾಪಕರು ಪಡೆದುಕೊಳ್ಳಬೇಕು ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೇಟಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಹಿತಿ ನೀಡುವುದೇ ಅಧ್ಯಾಪಕರ ಕೆಲಸವಲ್ಲ, ಗ್ರಹಿಕೆ ಬಹಳ ಮುಖ್ಯ. ಯಾವ ಪಾಠ ಮಾಡಿದರೂ ಕೂಡ, ಯಾವುದೇ ಪದ್ಧತಿ ಇದ್ದರೂ ಕೂಡ ಸಾಮಾನ್ಯ ಜನರ ಬದುಕನ್ನ ತಿಳಿಸುವುದು ಮತ್ತು ಅವರ ಪರವಾಗಿ ಇರುವುದು ಮುಖ್ಯವಾಗುತ್ತದೆ. ಚರಿತ್ರೆ ಪಾಠ ಮಾಡುವವರಿಗೆ ಬಹುದೊಡ್ಡ ಜವಾಬ್ದಾರಿಯಿದೆ. ಸಂಪ್ರದಾಯ ಕ್ರಮಗಳನ್ನು ಪಲ್ಲಟಗೊಳಿಸಿ ವಿಕ್ರಮ ಸಾಧಿಸಬೇಕಾಗುತ್ತದೆ. ಬೋಧಕರು ಯಾವ ರಾಜಕಾರಣದಿಂದಲೂ ಪ್ರೇರಿತರಾಗಬೇಕಾಗಿಲ್ಲ. ಯಾರ ಹಿಂಬಾಲಕರು ಆಗಬೇಕಾಗಿಲ್ಲ. ಇತಿಹಾಸ ನಮ್ಮನ್ನು ಬಂಧಿಸಬಾರದು ಅದು ಬಿಡುಗಡೆಗೊಳಿಸಬೇಕು. ಧರ್ಮಗಳ ಕುರಿತ ಇತಿಹಾಸವನ್ನು ಬೋಧಿಸುವಾಗ ಅದು ಸಾಮರಸ್ಯದತ್ತ ಸಾಗಬೇಕು ಎಂದು ತಿಳಿಸಿದರು.ಕುವೆಂಪು ವಿವಿ ಪರೀಕ್ಷಾ ಮಂಡಳಿ ಅಧ್ಯಕ್ಷ ಪ್ರೊ. ನಾಗೇಶಗೌಡ ಮಾತನಾಡಿ, ಎನ್‍ಇಪಿಯಿಂದ ತೊಂದರೆಗೆ ಸಿಲುಕಿದವರು ಬೋಧಕರು, ಪಠ್ಯಪುಸ್ತಕಗಳಿಲ್ಲದೆ ಪಠ್ಯಕ್ರಮ ಬಂದಿತ್ತು. ಇಂತಹ ಕಾರ್ಯಾಗಾರಗಳು ಮರು ವಿಮರ್ಶೆಗೆ ಒಳಗೊಂಡು ಹೇಗೆ ಬೋಧಿಸಬೇಕು ಎಂದು ಹೊಳಪು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಶಫೀವುಲ್ಲಾ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಎಚ್.ರಂಗನಾಥ್ ರಾವ್, ಸಹಪ್ರಾಧ್ಯಾಪಕ ಡಾ.ಎಚ್.ಎಂ.ಶಂಭುಲಿಂಗಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ಪ್ರಭಾಕರ್‍ರಾವ್ , ಪ್ರೊ.ಎಚ್.ದಿವಾಕರ್ , ಪ್ರೊ. ಎಸ್.ಸುಮಾ ಮುಂತಾದವರಿದ್ದರು.ಎನ್‍ಇಪಿ ಇಂದು ಅನಿವಾರ್ಯವಾಗಿದೆ. ಯಾವುದೇ ಹೊಸತು ಬಂದಾಗ ತಪ್ಪು ಸರಿಗಳು ಇದ್ದೇ ಇರುತ್ತವೆ. ಹಾಗೆಂದು ಅದನ್ನು ಸ್ವೀಕರಿಸಬಾರದು ಎಂದೇನಲ್ಲ, ಅಧ್ಯಾಪಕರು ನಿಂತ ನೀರಾಗಬಾರದು. ಹೊಸತನ್ನು ಕೂಡ ಅರಗಿಸುವುದನ್ನು ಕಲಿಯಬೇಕು.
ಪ್ರೊ.ರಾಜೇಶ್ವರಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು