ಸಾರಾಂಶ
ರಾಜ್ಯದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದಲ್ಲಿ ಹುಲ್ಲುಗಾವಲು ನೆಪದಲ್ಲಿ ಜೆಸಿಬಿಗಳು ಮತ್ತು ಹಿಟಾಚಿಗಳನ್ನು ಬಳಸಿ ಪರಿಸರಕ್ಕೆ ವಲಯ ಅರಣ್ಯಾಧಿಕಾರಿ ಧಕ್ಕೆ ತಂದಿದ್ದಾರೆಯೇ?. ಹೌದು ಎನ್ನುತ್ತಿದೆ ನುಗು ವಲಯದಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳಿಂದ ಕಾಡಲ್ಲಿ ಬೆಳೆದು ನಿಂತರ ದಿಂಡಲ್, ಕಾರೆ, ಸೊಳ್ಳಿ ಮರಗಳನ್ನು ಬುಡ ಸಮೇತ ಕಿತ್ತು ಹಾಕುವ ಛಾಯ ಚಿತ್ರಗಳನ್ನು ಗಮನಿಸಬಹುದು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ರಾಜ್ಯದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವಲಯದಲ್ಲಿ ಹುಲ್ಲುಗಾವಲು ನೆಪದಲ್ಲಿ ಜೆಸಿಬಿಗಳು ಮತ್ತು ಹಿಟಾಚಿಗಳನ್ನು ಬಳಸಿ ಪರಿಸರಕ್ಕೆ ವಲಯ ಅರಣ್ಯಾಧಿಕಾರಿ ಧಕ್ಕೆ ತಂದಿದ್ದಾರೆಯೇ?. ಹೌದು ಎನ್ನುತ್ತಿದೆ ನುಗು ವಲಯದಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳಿಂದ ಕಾಡಲ್ಲಿ ಬೆಳೆದು ನಿಂತರ ದಿಂಡಲ್, ಕಾರೆ, ಸೊಳ್ಳಿ ಮರಗಳನ್ನು ಬುಡ ಸಮೇತ ಕಿತ್ತು ಹಾಕುವ ಛಾಯ ಚಿತ್ರಗಳನ್ನು ಗಮನಿಸಬಹುದು.ರಾಜ್ಯ ಸರ್ಕಾರ ಒಂದು ಹೆಕ್ಟೇರ್ ಹುಲ್ಲುಗಾವಲು ಅಭಿವೃದ್ಧಿಗೆ 10 ಲಕ್ಷ ರು.ಗಳನ್ನು ನೀಡುತ್ತಿದೆ. 100 ಹೆಕ್ಟೇರ್‌ನಷ್ಟು ಹುಲ್ಲುಗಾವಲಿಗೆ ನುಗು ವಲಯದಲ್ಲಿ ಕ್ರಿಯಾ ಯೋಜನೆ ತಯಾರಿಸಿದ್ದಾರೆ ಎನ್ನಲಾಗಿದೆ. ಹುಲ್ಲುಗಾವಲುಗಳನ್ನು ಹಸ್ತ ಚಾಲಿತವಾಗಿ ಅಭಿವೃದ್ಧಿಪಡಿಸಲು ಮತ್ತು ಸ್ಥಳೀಯ ಜನರ ಬಳಸಿಕೊಂಡು ಸಬಲೀಕರಣಗೊಳಿಸಲು ಬದಲು ಅಧಿಕಾರಿಗಳು ಯಂತ್ರಗಳ ಮೂಲಕ ಕೆಲಸ ಮಾಡಿಸಿ ಹಣ ಮಾಡಲು ಹೊರಟಿದ್ದಾರೆ ಎಂಬ ಆರೋಪವಿದೆ.
ಕೆಲಸವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಮತ್ತು ತ್ವರಿತ ಹಣವನ್ನು ಗಳಿಸುವ ಅನ್ವೇಷಣೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಧ್ವಂಸಗೊಳಿಸಿದೆ ಎಂದು ಪರಿಸರವಾದಿಗಳ ಆರೋಪವಾಗಿದೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಮಾರ್ಗ ಸೂಚಿಗಳು ಹುಲಿ ಮೀಸಲು ಪ್ರದೇಶಗಳಲ್ಲಿ ಭಾರೀ ಯಂತ್ರೋಪಕರಣಗಳ ಬಳಕೆಯನ್ನು ನಿರ್ಬಂಧಿಸಿದ್ದರೂ, ಬಂಡೀಪುರದಲ್ಲಿ ಆವಾಸಸ್ಥಾನದ ಅವನತಿ ನಿರಂತರವಾಗಿ ಮುಂದುವರೆದಿದೆ.
ಎನ್‌ಟಿಸಿಎ ತಕ್ಷಣ ಮಧ್ಯಪ್ರವೇಶಿಸಿ ಕರ್ನಾಟಕ ಅರಣ್ಯ ಇಲಾಖೆಯು ಬಂಡೀಪುರ ಹುಲಿ ಮೀಸಲು ಪ್ರದೇಶವನ್ನು ನಾಶ ಮಾಡುವುದನ್ನು ತಡೆಯಬೇಕು. ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ ಸಂರಕ್ಷಿತ ಪ್ರದೇಶಗಳಲ್ಲಿ ಭಾರೀ ಯಂತ್ರೋಪಕರಣಗಳ ಬಳಕೆಯನ್ನು ನಿಲ್ಲಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ. ಹಿಟಾಚಿ ಮತ್ತು ಜೆಸಿಬಿಗಳ ದಾಳಿಯಿಂದ ಅರಣ್ಯ ಚೇತರಿಸಿಕೊಳ್ಳಲು ಹಲವು ದಶಕಗಳೇ ಬೇಕಾಗುತ್ತದೆ ಎಂಬುದು ಪರಿಸರ ವಾದಿಗಳ ಆತಂಕವಾಗಿದೆ.