ಗಂಗಾವತಿ ಕ್ಷೇತ್ರಕ್ಕೆ ಹಿಟ್ನಾಳ ಕುಟುಂಬ ಎಂಟ್ರಿ?

| Published : May 13 2025, 01:03 AM IST

ಸಾರಾಂಶ

ಹಲವು ವರ್ಷಗಳಿಂದ ಹಿಟ್ನಾಳ ಕುಟುಂಬ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಅಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಸ್ಪರ್ಧಿಸುತ್ತಿದ್ದರಿಂದ ಕ್ಷೇತ್ರದತ್ತ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾಯಿಸಿದರೆ ನಮ್ಮದೊಂದು ಹೆಸರಿರಲಿ ಎನ್ನುತ್ತಿದೆ ಹಿಟ್ನಾಳ ಕುಟುಂಬ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ಜೈಲು ಪಾಲಾಗಿ ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದರಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತದೆ ಎಂದು ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ.

ಇದರ ನಡುವೆ ಕಾಂಗ್ರೆಸ್ಸಿನಿಂದ ಹಿಟ್ನಾಳ ಕುಟುಂಬ ಕಣಕ್ಕೆ ಇಳಿಯಲಿದೆ ಎಂಬು ಮಾತುಗಳು ಸಹ ಮುನ್ನೆಲೆಗೆ ಬಂದಿವೆ. ಒಂದು ವೇಳೆ ಇಕ್ಬಾಲ್‌ ಅನ್ಸಾರಿ ಅವರಿಗೆ ಟಿಕೆಟ್‌ ನೀಡದಿದ್ದರೆ ತಮ್ಮ ಕುಟುಂಬದ ಹೆಸರು ಇರಲಿ ಎಂದು ಹೈಕಮಾಂಡ್‌ಗೆ ತಿಳಿಸಿದೆ ಎಂದು ತಿಳಿದುಬಂದಿದೆ.

ಹಲವು ವರ್ಷಗಳಿಂದ ಹಿಟ್ನಾಳ ಕುಟುಂಬ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಅಲ್ಲಿ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಸ್ಪರ್ಧಿಸುತ್ತಿದ್ದರಿಂದ ಕ್ಷೇತ್ರದತ್ತ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಇದೀಗ ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾಯಿಸಿದರೆ ನಮ್ಮದೊಂದು ಹೆಸರಿರಲಿ ಎನ್ನುತ್ತಿದೆ ಹಿಟ್ನಾಳ ಕುಟುಂಬ.

ಕೆ. ಬಸವರಾಜ ಹಿಟ್ನಾಳ ಅವರನ್ನೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಲು ತೆರೆಮರೆಯಲ್ಲಿ ಶತಾಯಗತಾಯ ಪ್ರಯತ್ನ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಹಿಂದೆ ಈ ಪ್ರಯತ್ನ ನಡೆಯಿತಾದರೂ ಕಾಂಗ್ರೆಸ್ ಹೈಕಮಾಂಡ್‌ ಸಹಕಾರ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕೈಬಿಡಲಾಗಿತ್ತು. ಸಂಸದ ರಾಜಶೇಖರ ಹಿಟ್ನಾಳ ಸಹ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಗುಟ್ಟಾಗಿಯೇನು ಇಲ್ಲ. ಆದರೆ, ತಾವು ಸಂಸದರಾಗಿರುವುದರಿಂದ ತಮ್ಮ ತಂದೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನಲಾಗುತ್ತಿದೆ.

ಅದೃಷ್ಟ ಪರೀಕ್ಷೆಗೆ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ಉಪಚುನಾವಣೆ ಎದುರಾದರೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆಯೇ ಎನ್ನುವುದು ಸದ್ಯದ ಕುತೂಹಲವಾಗಿದೆ. ಆದರೆ, ಮೂಲಗಳ ಪ್ರಕಾರ ಚುನಾವಣೆಗೆ ಅನ್ಸಾರಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ. ಅವರ ಬೆಂಬಲಿಗರು ಮಾತ್ರ, ಈ ಬಾರಿ ನಮ್ಮ ನಾಯಕರು ಅಖಾಡಕ್ಕೆ ಇಳಿಯುತ್ತಾರೆ ಎನ್ನುತ್ತಿದ್ದಾರೆ.

ಕರಡಿ ತಾಲೀಮು:

ಮಾಜಿ ಸಂಸದ ಸಂಗಣ್ಣ ಕರಡಿ ಸಹ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುವ ಕುರಿತು ತಾಲೀಮು ನಡೆಸಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಜೈಲಿಗೆ ಹೋಗುವ ಪೂರ್ವದಲ್ಲಿಯೇ ಸಂಗಣ್ಣ ಕರಡಿ ಗಂಗಾವತಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತೆರೆಮರೆಯಲ್ಲಿ ತಯಾರಿ ನಡೆಸಿದ್ದು ಗುಟ್ಟಾಗಿ ಉಳಿದಿರಲಿಲ್ಲ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಪ್ರಯತ್ನ ಮಾಡುವ ಮೂಲಕವೇ ಅವರು ಗಂಗಾವತಿಯತ್ತ ಚಿತ್ತ ವಹಿಸಿದ್ದಾರೆ ಎನ್ನುವುದು ಚರ್ಚೆಯಾಗುತ್ತಿತ್ತು. ಈಗ ಅದಕ್ಕೆ ಇಂಬು ಸಿಕ್ಕಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ಇಲ್ಲದೆ ಇರುವುದರಿಂದ ಕಾಂಗ್ರೆಸ್ ಪಕ್ಷದಿಂದಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಕ್ಕಾಗಿ ತಯಾರಿ ನಡೆಸಿದ್ದಾರೆ ಸಂಗಣ್ಣ ಕರಡಿ. ಇದು ಇವರ ಪ್ರಯತ್ನ ಈಗಿನದ್ದಲ್ಲ. ಈ ಹಿಂದೆಯೂ ಇತ್ತು. ಆದರೆ, ಗಂಗಾವತಿ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ನಿಗದಿಯಾಗಿದ್ದು ಹೈಕಮಾಂಡ್‌ ಅಭ್ಯರ್ಥಿ ಬದಲಾಸುತ್ತದೆಯೇ, ಬದಲಾಯಿಸಿದರೂ ಹಿಟ್ನಾಳ ಕುಟುಂಬಕ್ಕೆ ನೀಡುತ್ತದೆಯೋ ಅಥವಾ ಕರಡಿ ಅವರಿಗೆ ನೀಡುತ್ತಾರೆ ಎಂಬುದು ಚರ್ಚೆ ಹುಟ್ಟು ಹಾಕಿದೆ.