ಎಚ್‌ಐವಿ, ಏಡ್ಸ್ ಅರಿವು ಆಂದೋಲನ: ಮ್ಯಾರಥಾನ್

| Published : Aug 30 2025, 01:01 AM IST

ಸಾರಾಂಶ

ಈ ಸ್ಪರ್ಧೆಯ ಮುಖ್ಯ ಉದ್ದೇಶ ಎಚ್‌ಐವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ರಾಷ್ಟ್ರೀಯ ಉಚಿತ ಸಹಾಯವಾಣಿ 1097, ಎಚ್‌ಐವಿ, ಏಡ್ಸ್ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಕಾಯ್ದೆ 2017 ಇತ್ಯಾದಿ ಕುರಿತು ಅರಿವು ಮೂಡಿಸುವುದು.

ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು 73 ವಿದ್ಯಾರ್ಥಿಗಳು ಭಾಗಿಕನ್ನಡಪ್ರಭ ವಾರ್ತೆ ಮಡಿಕೇರಿ

2025-26ನೇ ಸಾಲಿನ ಯುವಜನೋತ್ಸವ ಎಚ್‌ಐವಿ ಏಡ್ಸ್ ಅರಿವು ಆಂದೋಲನ-ಕಾರ್ಯಕ್ರಮದ ಅಂಗವಾಗಿ (ರೆಡ್ ರಿಬ್ಬನ್ ಓಟ, ಎಚ್‌ಐವಿ, ಏಡ್ಸ್ ನಿಯಂತ್ರಣಕ್ಕಾಗಿ ಯುವಜನತೆ) ಎಚ್‌ಐವಿ, ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ ನಡೆಯಿತು.ಈ ಸ್ಪರ್ಧೆಯ ಮುಖ್ಯ ಉದ್ದೇಶ ಎಚ್‌ಐವಿ/ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ರಾಷ್ಟ್ರೀಯ ಉಚಿತ ಸಹಾಯವಾಣಿ 1097, ಎಚ್‌ಐವಿ, ಏಡ್ಸ್ (ತಡೆಗಟ್ಟುವಿಕೆ ಹಾಗೂ ನಿಯಂತ್ರಣ) ಕಾಯ್ದೆ 2017 ಇತ್ಯಾದಿ ಕುರಿತು ಅರಿವು ಮೂಡಿಸುವುದು.ಅದರಂತೆ ಕೊಡಗು ಜಿಲ್ಲಾ ಮಟ್ಟದ ಎಚ್‌ಐವಿ, ಏಡ್ಸ್ ಅರಿವು ಆಂದೋಲನ 2025-26ರ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕೊಡಗು ಶಾಖೆ ಇವರ ಸಹಯೋಗದೊಂದಿಗೆ ಮ್ಯಾರಾಥಾನ್ ಸ್ಪರ್ಧೆ (5 ಕಿ.ಮೀ.) ನಡೆಯಿತು.ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು 73 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಶಾಖೆಯ ರವೀಂದ್ರ ರೈ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮತ್ತು ಅಂಥೋನಿ ಡಿಸೋಜ, ಮಹಾಬಲ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತರಬೇತುದಾರರಾದ ಬಿಂದ್ಯಾ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನೀತಾ ಮುತ್ತಣ್ಣ, ಉಷಾ, ಕಮಲಾ ಮತ್ತು ಟೈನಿ ಹಾಗೂ ಡಿಂಪಲ್, ಚೈತನ್ಯ ಆರೈಕೆ ಮತ್ತು ಬೆಂಬಲ ಕೇಂದ್ರ ಮತ್ತು ಅರುಣ್ ಎ.ಆರ್.ಟಿ. ಕೇಂದ್ರದ ಆಪ್ತಸಮಾಲೋಚಕರು ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.ಮ್ಯಾರಥಾನ್ ಸ್ಪರ್ಧೆಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್, ಜನರಲ್ ತಿಮ್ಮಯ್ಯ ಸರ್ಕಲ್ (ಜಿ.ಟಿ. ಸರ್ಕಲ್) ಮುಖಾಂತರ ಹಾದು ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ತಲುಪಿತು.

ಗೌತಮ್‌, ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ

ವಿವಿಧ ಕಾಲೇಜುಗಳಿಂದ ಒಟ್ಟು 73 ವಿದ್ಯಾರ್ಥಿಗಳು ಭಾಗವಹಿಸಿ, ಮ್ಯಾರಥಾನ್‌ನಲ್ಲಿ ಬಾಲಕರ ವಿಭಾಗದಲ್ಲಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಗೌತಮ್ ಎಂ.ಎಸ್.(ಪ್ರಥಮ), ಸೋಮವಾರಪೇಟೆ ಸರ್ಕಾರಿ ಬಿಟಿಸಿಜಿ ಕಾಲೇಜಿನ ಚೇತನ್ (ದ್ವಿತೀಯ) ಮತ್ತು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಗೌತಮ್ ಪಿ.ಸಿ.(ತೃತೀಯ) ಸ್ಥಾನ ಪಡೆದು ವಿಜೇತರಾಗಿದ್ದಾರೆ. ಮ್ಯಾರಥಾನ್ ಬಾಲಕಿಯರ ವಿಭಾಗದಲ್ಲಿ ಸೋಮವಾರಪೇಟೆ ಸಂತ ಜೋಸೆಫ್ ಕಾಲೇಜಿನ ಐಶ್ವರ್ಯ ಕೆ.ವೈ.(ಪ್ರಥಮ), ಗೋಣಿಕೊಪ್ಪ ಕಾವೇರಿ ಕಾಲೇಜಿನ ಅರ್ಚನಾ ಯು.ಎನ್.(ದ್ವಿತೀಯ) ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಶ್ಮಿತಾ ಎ.ಆರ್.(ತೃತೀಯ) ಸ್ಥಾನ ಪಡೆದಿದ್ದಾರೆ.

ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಗೌತಮ್ ಎಸ್. ಮತ್ತು ಐಶ್ವರ್ಯ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಮೆಡಲ್‌ಗಳನ್ನು ವಿತರಿಸಲಾಯಿತು.