ಕೆರಗೋಡಿನಲ್ಲಿ ಹೊಸ ರಾಷ್ಟ್ರಧ್ವಜ ಆರೋಹಣ...!

| Published : May 22 2024, 12:49 AM IST

ಕೆರಗೋಡಿನಲ್ಲಿ ಹೊಸ ರಾಷ್ಟ್ರಧ್ವಜ ಆರೋಹಣ...!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಜನವರಿ ೨೨ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೆನಪಿಗಾಗಿ ಕೆರಗೋಡು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಿದ್ದ ೧೦೮ ಅಡಿ ಎತ್ತರದ ಸ್ಥಂಭದ ಮೇಲೆ ಹನುಮ ಧ್ವಜ ಹಾರಾಟ ನಡೆಸಿದ್ದು ವಿವಾದ ಸೃಷ್ಟಿಗೆ ಕಾರಣವಾಗಿತ್ತು. ಆನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ತಂಭದಿಂದ ಹನುಮ ಧ್ವಜವನ್ನು ತೆರವುಗೊಳಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮ ಧ್ವಜ ಹಾರಾಟದಿಂದ ವಿವಾದದ ಕೇಂದ್ರ ಬಿಂದುವಾಗಿರುವ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಮಂಗಳವಾರ ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆಯಲ್ಲಿ ಹೊಸದಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದೆ.

ವಿವಾದ ಸೃಷ್ಟಿಯಾಗಿದ್ದ ಸಮಯದಲ್ಲಿ ಆತುರಾತುರವಾಗಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಆ ಧ್ವಜ ಬಿಸಿಲು, ಮಳೆ ಗಾಳಿಯಿಂದ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಹಳೆಯ ರಾಷ್ಟ್ರಧ್ವಜವನ್ನು ತೆರವುಗೊಳಿಸಿ ಹೊಸ ರಾಷ್ಟ್ರ ಧ್ವಜಾರೋಹಣ ಮಾಡಿತು. ಧ್ವಜಾರೋಹಣ ಶಾಂತಿಯುತವಾಗಿ ನಡೆದಿರುವುದು ಪರಿಸ್ಥಿತಿ ತಿಳಿಯಾಗಿರುವಂತೆ ಕಂಡುಬಂದರೂ ವಿವಾದ ಇನ್ನೂ ಬೂದಿಮುಚ್ಚಿದ ಕೆಂಡದಂತೆಯೇ ಇದೆ.

ಕಳೆದ ಜನವರಿ ೨೨ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೆನಪಿಗಾಗಿ ಕೆರಗೋಡು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಿದ್ದ ೧೦೮ ಅಡಿ ಎತ್ತರದ ಸ್ಥಂಭದ ಮೇಲೆ ಹನುಮ ಧ್ವಜ ಹಾರಾಟ ನಡೆಸಿದ್ದು ವಿವಾದ ಸೃಷ್ಟಿಗೆ ಕಾರಣವಾಗಿತ್ತು. ಆನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸ್ತಂಭದಿಂದ ಹನುಮ ಧ್ವಜವನ್ನು ತೆರವುಗೊಳಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿತ್ತು.

ಹನುಮ ಧ್ವಜ ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು, ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀರ್ವ ವಿರೋಧ ವ್ಯಕ್ತಪಡಿಸಿದ್ದರು. ಹೋರಾಟವನ್ನು ತೀವ್ರಗೊಳಿಸಿದ್ದರು. ನಂತರದ ದಿನಗಳಲ್ಲಿ ವಿವಾದ ತಣ್ಣಗಾಗಿತ್ತು.

ಜಿಲ್ಲಾಡಳಿತ ಮಂಗಳವಾರ ಬೆಳ್ಳಂಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಪರ ಜಿಲ್ಲಾಕಾರಿ ಡಾ. ಎಚ್.ಎಲ್.ನಾಗರಾಜು ಅವರು ಕೆರಗೋಡು ಗ್ರಾಮಕ್ಕೆ ತೆರಳಿ ರಾಷ್ಟ್ರ ಧ್ವಜಾರೋಹಣ ಮಾಡಿದರು.

ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಕೆರಗೋಡು ಗ್ರಾಮದಲ್ಲಿ ಹಿಂದೆ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಗಾಳಿಗೆ ಧ್ವಜ ಗಂಟಾಗಿ ಸರಿಯಾದ ರೀತಿಯಲ್ಲಿ ಹಾರುತ್ತಿರಲಿಲ್ಲ. ಹೀಗಾಗಿ ಹಳೆಯ ಧ್ವಜ ಬದಲಿಸಿ ಹೊಸ ಧ್ವಜ ಹಾರಿಸಲಾಗಿದೆ. ಹಿಂದೆ ಇದ್ದ ಧ್ವಜದ ಅಳತೆಯಲ್ಲೇ, ಈಗ ಹೊಸ ರಾಷ್ಟ್ರ ಧ್ವಜವನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ರಾಷ್ಟ್ರ ಧ್ವಜ ಹಾರಿಸುತ್ತೇವೆ ಎಂದರು.

ಧ್ವಜ ಹೋರಾಟ ನಿಲ್ಲುವುದಿಲ್ಲ:

ಹಳೆಯ ರಾಷ್ಟ್ರಧ್ವಜವನ್ನು ತೆರವುಗೊಳಿಸಿ ಹೊಸ ರಾಷ್ಟ್ರಧ್ವಜ ಹಾರಿಸಿರುವ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇಷ್ಟು ದೊಡ್ಡ ಧ್ವಜ ಸ್ತಂಭಕ್ಕೆ ಚಿಕ್ಕ ರಾಷ್ಟ್ರ ಧ್ವಜ ಸಲ್ಲದು. ಜಿಲ್ಲಾಡಳಿತ ರಾಷ್ಟ್ರ ಧ್ವಜ ಹಾರಿಸಿರುವುದು ಅಸಮಾಧಾನ ತಂದಿದೆ. ದೊಡ್ಡ ರಾಷ್ಟ್ರ ಧ್ವಜ ಹಾರಿಸುವಂತೆ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ತರಾತುರಿಯಾಗಿ ಹೊಸ ಧ್ವಜ ಹಾರಿಸಿದ್ದಾರೆ. ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜೂ.೪ರ ನಂತರ ಹನುಮ ಧ್ವಜ ಹೋರಾಟ ತೀವ್ರವಾಗಲಿದೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಮುಂದಿನ ಹೋರಾಟದ ಪರಿಣಾಮವನ್ನು ಸರ್ಕಾರ ಎದುರಿಸಲಿದೆ. ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಡಲು ಅಭ್ಯಂತರವಿಲ್ಲ. ಆದರೆ, ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶವೇ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಧ್ವಜ ವಿವಾದ ಮತ್ತೆ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುವುದೆಂಬುದನ್ನು ಕಾದು ನೋಡಬೇಕಿದೆ.