ಹೊಕ್ಕಾಡಿಗೋಳಿ: ಇಂದು ‘ಒಂದೇ ದಿನ ಎರಡು ಕಂಬಳ’ಕ್ಕೆ ಸಿದ್ಧತೆ

| Published : Mar 16 2024, 01:56 AM IST

ಸಾರಾಂಶ

ಎರಡೂ ಕರೆಗಳಲ್ಲಿ ಕುದಿ ಕಂಬಳ ನಡೆಸಿ ಪ್ರತ್ಯೇಕ ಆಮಂತ್ರಣ ಪತ್ರವೂ ಬಿಡಗುಡೆಗೊಳಿಸುವ ಮೂಲಕ ಜಿಲ್ಲಾ ಕಂಬಳ ಸಮಿತಿ ಮತ್ತು ಶಿಸ್ತು ಸಮಿತಿಗೆ ಸವಾಲು ಎಸೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನ ಸಿದ್ದಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿಯಲ್ಲಿ ಉಂಟಾದ ಕೆಲವೊಂದು ಗೊಂದಲ ಮತ್ತು ವೈಮನಸ್ಸು ಅವಿಭಜಿತ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಎಂಬಂತೆ ‘ಒಂದೇ ದಿನ ಅಕ್ಕ -ಪಕ್ಕದಲ್ಲಿ ಎರಡು ಪ್ರತ್ಯೇಕ ಕಂಬಳ’ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಕಳೆದ ಎರಡೂವರೆ ತಿಂಗಳ ಹಿಂದೆ ಹೊಕ್ಕಾಡಿಗೋಳಿ ವೀರ- ವಿಕ್ರಮ ಜೋಡುಕರೆ ಬಳಿ ಎರಡೆರಡು ತಂಡಗಳು ಪ್ರತ್ಯೇಕ ಸಭೆ ನಡೆಸಿ, ಪ್ರತ್ಯೇಕ ಸಮಿತಿ ರಚಿಸಿಕೊಂಡಿದೆ. ಕಳೆದ 7 ವರ್ಷಗಳಿಂದ ಹೊಕ್ಕಾಡಿಗೋಳಿಯಲ್ಲಿ ಕಂಬಳ ನಡೆಸುತ್ತಿರುವ ರಶ್ಮಿತ್ ಶೆಟ್ಟಿ ಕೈತ್ರೋಡಿ ನೇತೃತ್ವದಲ್ಲಿ ಹೊಕ್ಕಾಡಿಗೋಳಿ ಮಹಿಷ ಮರ್ಧಿನಿ ಕಂಬಳ ಸಮಿತಿ ಮತ್ತು ಕಂಬಳ ಕೋಣಗಳ ಯಜಮಾನ ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದಲ್ಲಿ ಹೊಕ್ಕಾಡಿಗೋಳಿ ಮಹಿಷ ಮರ್ಧಿನಿ ಕಂಬಳ ಸಮಿತಿ ರಚಿಸಿಕೊಂಡಿತ್ತು.

ಇದೇ ವೇಳೆ ಜ.13ರಂದು ಕಂಬಳ ನಡೆಸಲು ರಶ್ಮಿತ್ ಶೆಟ್ಟಿ ನೇತೃತ್ವದ ಸಮಿತಿಗೆ ಜಿಲ್ಲಾ ಕಂಬಳ ಸಮಿತಿ ದಿನ ನಿಗದಿಗೊಳಿಸಿದ್ದು, ಅಲ್ಲಿನ ಐವರು ಖಾಸಗಿ ಜಮೀನು ಮಾಲೀಕರ ಪೈಕಿ ಒಬ್ಬರು ಜಮೀನು ನೀಡದೆ ಕಂಬಳ ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ವೇಣೂರು ಕಂಬಳದ ದಿನ ಬದಲಾಯಿಸಿ, ಸಂದೀಪ್ ಶೆಟ್ಟಿ ನೇತೃತ್ವದ ಎರಡನೇ ಸಮಿತಿಗೆ ಮಾ.16ರಂದು ಕಂಬಳ ನಡೆಸಲು ದಿನ ನಿಗದಿಗೊಳಿಸಿರುವುದಾಗಿ ಜಿಲ್ಲಾ ಕಂಬಳ ಸಮಿತಿ ಹೇಳಿಕೊಂಡಿತ್ತು. ಇನ್ನೊಂದೆಡೆ ಈ ಎರಡೂ ಸಮಿತಿಗಳಿಗೆ ದಿನಾಂಕ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಗುಣಪಾಲ ಕಡಂಬ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಅಚ್ಚರಿ ಮೂಡಿಸಿದ್ದರು. ಈ ಎರಡೂ ಕಡೆ ಸುಮಾರು 50ಕ್ಕೂ ಮಿಕ್ಕಿ ಮಂದಿ ಯುವಕರು ಪ್ರತಿದಿನ ಶ್ರಮದಾನ ನಡೆಸಿ ಸುಸಜ್ಜಿತ ಕರೆ ಸಿದ್ಧಗೊಳಿಸುವಲ್ಲಿ ರಾತ್ರಿ-ಹಗಲು ಶ್ರಮಿಸಿ ಗಮನ ಸೆಳೆದಿದ್ದಾರೆ. ಕಂಬಳಕ್ಕೆ ಎಲ್ಲ ಸಿದ್ಧತೆ: ಇದೀಗ ಹೊಕ್ಕಾಡಿಗೋಳಿ ವೀರ- ವಿಕ್ರಮ ಜೋಡುಕರೆ ಗಂತಿನ ಭಾಗ ವಿಸ್ತರಿಸಿ ತಡೆಗೋಡೆ ನಿರ್ಮಿಸುವ ಮೂಲಕ ಕರೆ ದುರಸ್ತಿಗೊಳಿಸಿ ರಶ್ಮಿತ್ ಶೆಟ್ಟಿ ನೇತೃತ್ವದ ಸಮಿತಿ ಮಾ.16ರಂದು ಕಂಬಳ ನಡೆಸಲು ಕಳೆದ ಗುರುವಾರ ಪ್ರಾಯೋಗಿಕವಾಗಿ ಕುದಿ ಕಂಬಳ ನಡೆಸಿದ್ದಾರೆ. ಇನ್ನೊಂದೆಡೆ ಭವಿಷ್ಯದಲ್ಲಿ ಕಂಬಳ ನಡೆಸಲು ಜಮೀನು ಸಮಸ್ಯೆ ಅಡ್ಡಿಯಾಗಬಾರದು ಎಂಬ ನಿಟ್ಟಿನಲ್ಲಿ ಸಂದೀಪ್ ಶೆಟ್ಟಿ ನೇತೃತ್ವದ ಎರಡನೇ ಸಮಿತಿ ಹೊಕ್ಕಾಡಿಗೋಳಿ ಸಮೀಪದ ಕೊಡಂಗೆ ಎಂಬಲ್ಲಿ ಸ್ಥಳದಾನಿ ಓಬಯ ಪೂಜಾರಿ ಮತ್ತು ಕೊರಗಪ್ಪ ಪೂಜಾರಿ ಇವರ ಜಮೀನಿನಲ್ಲಿ 15 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಜೋಡುಕರೆ ನಿರ್ಮಿಸಿ ಸೋಮವಾರ ಪ್ರಾಯೋಗಿಕವಾಗಿ ಕುದಿ ಕಂಬಳ ನಡೆಸಿದ್ದಾರೆ. ಈ ನಡುವೆ ಎರಡೂ ಸಮಿತಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಲವೊಂದು ಆರೋಪ- ಪ್ರತ್ಯಾರೋಪವೂ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ಸಿದ್ದಕಟ್ಟೆಯಲ್ಲಿ ಎರಡೂ ಸಮಿತಿಗಳು ಮಾ.16ರಂದೇ ಕಂಬಳ ನಡೆಸುವುದಾಗಿ ಬ್ಯಾನರ್ ಅಳವಡಿಸಿ ಗೊಂದಲ ಮೂಡಿಸಿದಾಗ ಬೆಳಪು ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಜಿಲ್ಲಾ ಕಂಬಳ ಸಮಿತಿ ಮತ್ತು ಭಾಸ್ಕರ ಎಸ್. ಕೋಟ್ಯಾನ್ ನೇತೃತ್ವದ ಶಿಸ್ತು ಸಮಿತಿ ತಂಡವು ಎರಡೂ ಕರೆಗಳಿಗೆ ಭೇಟಿ ನೀಡಿ, ಸಂದೀಪ್ ಶೆಟ್ಟಿ ನೇತೃತ್ವದ ಹೊಕ್ಕಾಡಿಗೋಳಿ ಕೊಡಂಗೆ ಕರೆಗೆ ಮೊದಲ ಆದ್ಯತೆ ನೀಡಿತ್ತು. ಈ ನಡುವೆ ರಶ್ಮಿತ್ ಶೆಟ್ಟಿ ನೇತೃತ್ವದ ಹೊಕ್ಕಾಡಿಗೋಳಿಗೆ ಮಾ.17 ಅಥವಾ ಬಳ್ಕುಂಜೆಗೆ ನೀಡಿದ್ದ ಏ.6 ರಂದು ಕಂಬಳ ನಡೆಸಲು ಸಲಹೆ ನೀಡಿರುವುದಾಗಿ ಇತ್ತೀಚೆಗೆ ನಡೆದ ವಾಮಂಜೂರು ತಿರುವೈಲು ಕಂಬಳದಲ್ಲಿ ಘೋಷಿಸಿದ್ದರು. ಆ ಬಳಿಕ ಒಂದೇ ದಿನ ಎರಡೂ ಕಂಬಳ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು ಎಚ್ಚರಿಕೆಯನ್ನೂ ನೀಡಿದ್ದರು.

ಇದೀಗ ಎರಡೂ ಕರೆಗಳಲ್ಲಿ ಕುದಿ ಕಂಬಳ ನಡೆಸಿ ಪ್ರತ್ಯೇಕ ಆಮಂತ್ರಣ ಪತ್ರವೂ ಬಿಡಗುಡೆಗೊಳಿಸುವ ಮೂಲಕ ಜಿಲ್ಲಾ ಕಂಬಳ ಸಮಿತಿ ಮತ್ತು ಶಿಸ್ತು ಸಮಿತಿಗೆ ಸವಾಲು ಎಸೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕಳೆದ 32 ವರ್ಷಗಳ ಹಿಂದೆ ಜಿಲ್ಲಾ ಕಂಬಳ ಸಮಿತಿ ರಚನೆಗೊಂಡು ‘ಪೇಟಾ’ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿ ಹೋರಾಟದ ಮೂಲಕವೇ ಉಳಿಸಿಕೊಂಡ ಕಂಬಳ ಕೂಟ ಕೇವಲ ಒಣಪ್ರತಿಷ್ಠೆ ಮತ್ತು ವೈಯಕ್ತಿಕ ಹಿತಾಸಕ್ತಿಗೆ ಬಲಿ ಕೊಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕಂಬಳಾಸಕ್ತರಿಂದ ಕೇಳಿ ಬಂದಿದೆ. ಸುಮಾರು 30 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಜೋಡಿ ಓಟದ ಕೋಣಗಳನ್ನು ಯಾವ ಕರೆಯಲ್ಲಿ ಓಡಿಸಬೇಕು ಎಂಬ ಬಗ್ಗೆ ಗೊಂದಲ ಓಟದ ಕೋಣಗಳ ಯಜಮಾನರಲ್ಲಿ ಉಂಟಾಗಿದೆ.