ಸಾರಾಂಶ
- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯಕುಮಾರ ಹೇಳಿಕೆ । ದಾವಣಗೆರೆ ದುಗ್ಗಮ್ಮನಿಗೆ ಪೂಜೆ, ದರ್ಗಾಗೆ ಚಾದರ ಹೊದಿಸಿ ಪ್ರಾರ್ಥನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏ.18ರ ಬದಲಿಗೆ, ಏ.17ರಂದೇ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ, ದರ್ಗಾದಲ್ಲಿ ಹೊದಿಕೆ ಅರ್ಪಿಸಿ, ಬಹಿರಂಗ ಸಭೆ ನಡೆಸಲಿದ್ದೇವೆ. ಅನಂತರ ಬೃಹತ್ ರ್ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಪಕ್ಷೇತರ ಅಭ್ಯರ್ಥಿ, ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಕಕ್ಕರಗೊಳ್ಳ ಜಿ.ಬಿ.ವಿನಯಕುಮಾರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏ.17ರ ಬೆಳಗ್ಗೆ 10 ಗಂಟೆಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಅನಂತರ ದರ್ಗಾಗೆ ತೆರಳಿ ಚಾದರ ಸಲ್ಲಿಸಿದ ನಂತರ, ಹಳೇ ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬಹಿರಂಗ ಸಭೆ ನಡೆಸಲಿದ್ದೇವೆ ಎಂದರು.
ಬಹಿರಂಗ ಸಭೆ ನಂತರ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ನಾಮಪತ್ರ ಸಲ್ಲಿಸಲಾಗುವುದು. ಏ.18ಕ್ಕೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ತೆರಳಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ, ಏ.18ಕ್ಕೆ ಕಾಂಗ್ರೆಸ್ ರ್ಯಾಲಿ ಇದೆ. ಹಾಗಾಗಿ, ಮೆರವಣಿಗೆಯಲ್ಲಿ ಗೊಂದಲ ಆಗಬಾರದೆಂಬ ಕಾರಣಕ್ಕೆ ಏ.17ರಂದೇ ಬೃಹತ್ ರ್ಯಾಲಿಯಲ್ಲಿ ತೆರಳಿ, ನಾಮಪತ್ರ ಸಲ್ಲಿಸುವೆ ಎಂದು ಸ್ಪಷ್ಟಪಡಿಸಿದರು.ಶ್ರೀ ಬೀರಲಿಂಗೇಶ್ವರ ಮೈದಾನದಿಂದ ಬೆಳಗ್ಗೆ 10ರಿಂದ ಹೊರಡುವ ಮೆರವಣಿಗೆ ಮಧ್ಯಾಹ್ನ 3 ಗಂಟೆಯೊಳಗೆ ಡಿಸಿ ಕಚೇರಿ ತಲುಪಲಿದೆ. ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅವರಿಗೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುತ್ತೇವೆ. ಮಾರ್ಗ ಮಧ್ಯೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ, ದೇವರಾಜ ಅರಸು ಪುತ್ಥಳಿ ಸೇರಿದಂತೆ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮೂಲಕ ಅಪಾರ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರ ಸಮೇತ ಡಿಸಿ ಕಚೇರಿ ತಲುಪಲಾಗುವುದು. ಬಳಿಕ ಉಮೇದುವಾರಿಕೆ ಅರ್ಪಿಸುತ್ತೇವೆ ಎಂದು ತಿಳಿಸಿದರು.
ನಾಮಪತ್ರ ಹಿಂಪಡೆಯಲ್ಲ:ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಸ್ತ ಮತಬಾಂಧವರು, ಹಿತೈಷಿಗಳು, ಬೆಂಬಲಿಗರು, ಸರ್ವ ಜಾತಿ, ಸಮುದಾಯಗಳ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಈ ಮೂಲಕ ತಮ್ಮನ್ನು ದಾವಣಗೆರೆ ಕ್ಷೇತ್ರದ ಚುನಾವಣೆಯಲ್ಲಿ ಮತ ನೀಡಿ, ಗೆಲ್ಲಿಸಬೇಕು. ನನ್ನ ಮೇಲೆ ಎಷ್ಟೇ ಒತ್ತಡ, ಪ್ರಭಾವ ಬೀರಿದರೂ ನಾನು ಮಾತ್ರ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಚಂದ್ರು ಬಸವಂತ, ಹಾಲಸ್ವಾಮಿ, ರಾಜಶೇಖರ, ಬಸವರಾಜ, ಅನಂತರಾಜ ಹೊಳಲು, ಪುರಂದರ ಲೋಕಿಕೆರೆ ಇತರರು ಇದ್ದರು.- - -
ಬಾಕ್ಸ್ ಅಕ್ಕೋರ ನೋಟು, ವಿನಯಕುಮಾರ್‌ಗೆ ಓಟು ಲೋಕಸಭೆ ಚುನಾವಣೆ ಗಾಳಿಯ ದಿಕ್ಸೂಚಿ ಬಲವಾಗಿ ಬೀಸಲಿದೆ. ನಾನು ಯಾರನ್ನೋ ಸೋಲಿಸುವುದಕ್ಕೆಂದು ರಾಜಕೀಯಕ್ಕೆ ಬಂದವನಲ್ಲ. ಹೊಸ ಮುಖದ ಅವಶ್ಯಕತೆ ಕ್ಷೇತ್ರದ ಜನರಿಗೆ ಇದೆ. ಕ್ಷೇತ್ರದಲ್ಲಿ ಕೆಲಸ ಮಾಡಲು ವಿನಯಕುಮಾರ ಸೇರಿದಂತೆ ವಿನಯ್ ಪಡೆ ಸಿದ್ಧವಾಗಿದೆ. ಕ್ಷೇತ್ರದ 1946 ಬೂತ್‌ಗಳಲ್ಲೂ ಸ್ವಯಂಪ್ರೇರಿತರಾಗಿ ಕೆಲಸ ಮಾಡಲು ಜನ ಮುಂದೆ ಬಂದಿದ್ದಾರೆ. ಒಟ್ಟಾರೆ ದಾವಣಗೆರೆ ಕ್ಷೇತ್ರದಲ್ಲಿ ಅಕ್ಕೋರ ನೋಟು, ವಿನಯಕುಮಾರ್‌ಗೆ ಓಟು ಎಂಬ ಘೋಷವಾಕ್ಯದಂಥ ಮಾತು ಕೇಳಿ ಬರುತ್ತಿದೆ. ಅದೇ ವಾತಾವರಣ ನಿರ್ಮಾಣವಾಗಿದೆ ಎಂದು ವಿನಯಕುಮಾರ ತಿಳಿಸಿದರು.- - - -16ಕೆಡಿವಿಜಿ1:
ದಾವಣಗೆರೆಯಲ್ಲಿ ಮಂಗಳವಾರ ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಟಿಯಲ್ಲಿ ಪಕ್ಷೇತರನಾಗಿ ನಾಮಪತ್ರ ಸಲ್ಲಿಸುವ ಕುರಿತು ಮಾತನಾಡಿದರು.