ಉತ್ತರ ಕರ್ನಾಟಕದ ಬಾಗಲಕೋಟೆಯ ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಂಗಳೂರ ನಗರದಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಬಾಗಲಕೋಟೆ ಮೂಲ ನಿವಾಸಿಗಳ ಸ್ಥಾಪಿತ ಚಾಲುಕ್ಯ ಸಾಂಸ್ಕೃತಿಕ ಸಂಘದ ವತಿಯಿಂದ ರಾಜಾಜಿನಗರದ ಕೆಎಲ್ಇ ಕಾಲೇಜು ಮೈದಾನದಲ್ಲಿ ಹೋಳಿ ಹಲಗೆ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉತ್ತರ ಕರ್ನಾಟಕದ ಬಾಗಲಕೋಟೆಯ ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಂಗಳೂರ ನಗರದಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಬಾಗಲಕೋಟೆ ಮೂಲ ನಿವಾಸಿಗಳ ಸ್ಥಾಪಿತ ಚಾಲುಕ್ಯ ಸಾಂಸ್ಕೃತಿಕ ಸಂಘದ ವತಿಯಿಂದ ರಾಜಾಜಿನಗರದ ಕೆಎಲ್ಇ ಕಾಲೇಜು ಮೈದಾನದಲ್ಲಿ ಹೋಳಿ ಹಲಗೆ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಹಲಗೆಯ ನಾದ, ಕಂಸಾಳೆ ಮತ್ತು ತಮಟೆಗಳ ಘೋಷ, ಶಹನಾಯಿಯ ಮಧುರ ಸ್ವರಗಳೊಂದಿಗೆ ನಡೆದ ಈ ಮೇಳವು ಬಣ್ಣಗಳ ಹಬ್ಬವಾದ ಹೋಳಿಗೆ ವಿಶೇಷ ಕಳೆ ತಂತು. ಹಿರಿಯರು-ಕಿರಿಯರು ಎನ್ನದೇ ಎಲ್ಲರೂ ಭಾಗವಹಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಹಿಳೆಯರೂ ಉತ್ಸಾಹದಿಂದ ಭಾಗವಹಿಸಿ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವ ಮೂಲಕ ಹಬ್ಬದ ಸಂಭ್ರಮಿಸಿದರು.ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಹೋಳಿ ಹಬ್ಬದ ಪ್ರಮುಖ ಅಂಶವಾದ ಹಲಗೆ ವಾದ್ಯಪ್ರದರ್ಶನವನ್ನು ಬೆಂಗಳೂರಿನ ಜನತೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಹೋಳಿ ಹಬ್ಬದ ಆರಂಭದ ಸಂಕೇತವಾಗಿ ಹಲಗೆ ಬಾರಿಸುವ ಸಂಪ್ರದಾಯವನ್ನು ಈ ಮೇಳದ ಮೂಲಕ ಜೀವಂತಗೊಳಿಸಲಾಯಿತು.

ಉದ್ಘಾಟಕರಾಗಿ ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಚಾಲನೆ ನೀಡಿ, ಉತ್ತರ ಕರ್ನಾಟಕದ ಜನಪದ ಕಲೆಗಳು ಮತ್ತು ಪರಂಪರೆ ಸಂರಕ್ಷಿಸಿ ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಅಗತ್ಯತೆ ಒತ್ತಿಹೇಳಿದರು.

ಉತ್ತರ ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ ಬಿ ಜಿ ಅವಟಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನರು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಸಂಸ್ಕೃತಿಯ ಸೊಬಗನ್ನು ಹಂಚಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಮೇಳ ಆಯೋಜಿಸಿದ್ದೇವೆ. ನಮ್ಮ ಪರಂಪರೆಯ ಸಂಭ್ರಮವನ್ನು ಇಲ್ಲಿನ ಜನತೆ ಸಹ ಭಾಗವಹಿಸಿ ಅನುಭವಿಸಿರುವುದು ಸಂತೋಷಕರ ಸಂಗತಿ ಎಂದು ಚಾಲುಕ್ಯ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ತಿಳಿಸಿದರು.

ಹೋಳಿ ಹಲಗೆ ಮೇಳವು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ಒಂದಾಗಿ ಸೌಹಾರ್ದದಿಂದ ಆಚರಿಸುವ ಹಬ್ಬದ ರೂಪದಲ್ಲಿ ಮೂಡಿಬಂದಿದ್ದು, ಉತ್ತರ ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಬೆಂಗಳೂರಿನಲ್ಲಿ ಮೆರೆಯುವಲ್ಲಿ ಯಶಸ್ವಿಯಾಗಿದೆ ಎಂದು ಚಾಲುಕ್ಯ ಸಾಂಸ್ಕೃತಿಕ ಸಂಘದ ಸದಸ್ಯರಾದ ನಾಗರಾಜ ಹುಂಡೇಕಾರ ತಿಳಿಸಿದರು.

ಚಾಲುಕ್ಯ ಸಾಂಸ್ಕೃತಿಕ ಸಂಘದ ಸದಸ್ಯರಾದ ಸಂಗಮೇಶ ಹದ್ಲಿ, ಜಗದೀಶ ಹಿರೇಮನಿ, ವೇದ ಮಳಗಿ, ಪ್ರಭು ಇಂಡಿ, ಶ್ರೀಶೈಲ್ ಜಗಜಿನ್ನಿ, ಈಶ್ವರ ಇಂಡಿ, ಅನಂತ ಧೋಂಗಡಿ, ಸುನೀಲ ಹದ್ಲಿ, ಬದ್ರಿ ಕಾಖಂಡಕಿ, ಸಂದೀಪ ಕುಲಕರ್ಣಿ ಉಪಸ್ಥಿತರಿದ್ದರು.