ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಒಂದು ಕಡೆ ದುಡ್ಡು ಕೊಟ್ಟರೂ ಟ್ಯಾಂಕರ್ ನೀರು ಸಿಗದ ಸಂದರ್ಭ ಎದುರಾಗಿದ್ದರೆ ಇನ್ನೊಂದು ಕಡೆ ಹೋಳಿ ಹಬ್ಬಕ್ಕಾಗಿ ಕೆಲ ಹೋಟೆಲ್, ರೆಸ್ಟೋರೆಂಟ್‌ಗಳು ಪೂಲ್ ಪಾರ್ಟಿ, ರೇನ್ ಡಿಸ್ಕೋಗಳನ್ನು ತಮ್ಮ ಪ್ಯಾಕೇಜ್‌ನಲ್ಲಿ ಘೋಷಿಸಿವೆ.ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಹೋಳಿಗಾಗಿ ನೀರು ವ್ಯರ್ಥ ಮಾಡದಂತೆ ಸೂಚಿಸಿವೆ. ಇದರ ನಡುವೆಯೂ ನಗರದೊಳಗಿನ ಹಾಗೂ ಹೊರವಲಯದ ಕೆಲ ಹೋಟೆಲ್‌ಗಳು ಹಲವು ಕಾರ್ಯಕ್ರಮ ರೂಪಿಸಿವೆ. ಹಲವು ಹೋಟೆಲ್‌ಗಳು ಡ್ರೈ ಹೋಳಿ ಎಂದು ಖಚಿತವಾಗಿ ಉಲ್ಲೇಖಿಸಿವೆ.
ಆದರೆ, ಇನ್ನು ಹಲವು ಹೋಟೆಲ್‌ಗಳು ಪೂಲ್ ಪಾರ್ಟಿ, ರೇನ್ ಡಿಸ್ಕೋ, ವಾಟರ್ ಸ್ಪ್ರೇಗಳನ್ನು ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಿವೆ. ಹೋಟೆಲ್‌ಗಳು ಮಾ.23, 24, 25 ದಿನಗಳಂದು ಹೋಳಿ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಉಚಿತ ಬಣ್ಣ, ಹೋರಾಂಗಣ ಬಣ್ಣದಾಟ, ಬಾಲಿವುಡ್, ಹಾಲಿವುಡ್ ಮ್ಯೂಸಿಕ್, ಖಾದ್ಯಗಳನ್ನು ಗ್ರಾಹಕರಿಗೆ ನೀಡುವುದಾಗಿ ತಿಳಿಸಿವೆ.ಇದರ ಜೊತೆಗೆ ಬರದ ನಡುವೆಯೂ ಹೆಚ್ಚು ನೀರು ಬಳಕೆಯಾಗುವ ಮೋಜಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಏಕಕಾಲಕ್ಕೆ 2ರಿಂದ 5 ಸಾವಿರದವರೆಗೆ ಜನ ಸೇರುವ ಕಾರ್ಯಕ್ರಮಗಳು ಕೆಲವೆಡೆ ಸಿದ್ಧತೆಯಾಗಿವೆ. ಕುಟುಂಬ, ಸ್ನೇಹಿತರ ಗುಂಪಿಗಾಗಿ ಪ್ರತ್ಯೇಕ ದರ ಪಟ್ಟಿಯನ್ನು ತಿಳಿಸಿವೆ. ಇದರಿಂದ ವಿಫುಲ ಪ್ರಮಾಣದ ನೀರು ಪೋಲಾಗುವ ಸಾಧ್ಯತೆಯಿದೆ.
ಜಲಮಂಡಳಿ, ಬಿಬಿಎಂಪಿ ಎಚ್ಚರಿಕೆ ಬಳಿಕ ಪ್ಯಾಕೇಜ್‌ನಲ್ಲಿ ಯಾವುದೇ ಬದಲಾವಣೆ ಮಾಡಿರುವುದನ್ನೂ ತಿಳಿಸಲಾಗಿಲ್ಲ. ಇದರಿಂದ ಗ್ರಾಹಕರೂ ಗೊಂದಲಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ನೀರಿನ ಕೊರತೆಯಿದ್ದು, ದೈನಂದಿನ ಬಳಕೆಗೂ ಜನತೆ ಪರದಾಡುತ್ತಿದ್ದಾರೆ. ಈ ನಡುವೆ ಪ್ರತಿಷ್ಠಿತ, ಐಷಾರಾಮಿ ಹೋಟೆಲ್‌ಗಳು ಹೋಳಿ ಇವೆಂಟ್ ಆಯೋಜನೆ ಮಾಡಿರುವುದು ನಗರದ ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.ಹಬ್ಬಕ್ಕಾಗಿ ನೀರನ್ನು ಪೋಲು ಮಾಡಬೇಡಿ: ಜಲಮಂಡಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ನೀರಿನ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಳಿ ಹಬ್ಬದಂದು ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸದಂತೆ ಸಾರ್ವಜನಿಕರು ಹಾಗೂ ಹೋಳಿ ಹಬ್ಬದ ಕಾರ್ಯಕ್ರಮ ಆಯೋಜಕರಿಗೆ ಜಲಮಂಡಳಿ ಸೂಚನೆ ನೀಡಿದೆ.
ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಈ ಬಾರಿ ನೀರಿನ ಅಭಾವ ಹೆಚ್ಚಾಗಿದೆ. ನೀರಿನ ಸಮಸ್ಯೆಯಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ.25ರಂದು ನಡೆಯಲಿರುವ ಹೋಳಿ ಹಬ್ಬದ ಸಂದರ್ಭದಲ್ಲಿ ನೀರು ಪೋಲಾಗುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸಬಾರದು, ಒಂದು ವೇಳೆ ಆಯೋಜಿಸಿದರೂ ಕಾವೇರಿ ನೀರಿ ಅಥವಾ ಕೊಳವೆಬಾವಿ ನೀರು ಬಳಸದಂತೆ ತಿಳಿಸಲಾಗಿದೆ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಕೆ
ಕನ್ನಡಪ್ರಭ ವಾರ್ತೆ ಬೆಂಗಳೂರುಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.
ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಒದಗಿಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿ ಪದಾಧಿಕಾರಿಗಳು ಬುಧವಾರ ಡಾ। ರಾಮ್‌ಪ್ರಸಾತ್ ಮನೋಹರ್ ಅವರನ್ನು ಭೇಟಿಯಾಗಿ ಮನವಿ ಮಾಡಿದರು. ಪಂದ್ಯಾವಳಿ ಸಂದರ್ಭದಲ್ಲಿ ದಿನಕ್ಕೆ ₹75 ಸಾವಿರ ಲೀಟರ್ ನೀರು ಅವಶ್ಯಕತೆಯಿದ್ದು, ಕಬ್ಬನ್ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾದ ನೀರನ್ನು ಕ್ರೀಡಾಂಗಣಕ್ಕೆ ಪೂರೈಸುವಂತೆ ಕೋರಿದರು.ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಮ್‌ಪ್ರಸಾತ್ ಮನೋಹರ್, ಸದ್ಯ ನಗರದಲ್ಲಿ ನೀರಿನ ಸಮಸ್ಯೆಯಿದೆ. ಕಾವೇರಿ ನೀರು ಮತ್ತು ಕೊಳವೆಬಾವಿ ನೀರು ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲೂ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರು ಬಳಸುವುದು ಒಳ್ಳೆಯದು ಎಂದರು.